ಮಂಗಳವಾರ, ಅಕ್ಟೋಬರ್ 20, 2020
25 °C
ದುರಸ್ತಿ ಮಾಡದ ವ್ಯವಸ್ಥೆ ಬಗ್ಗೆ ಗ್ರಾಮಸ್ಥರು ಅಸಮಾಧಾನ

ಹದಗೆಟ್ಟ ರಸ್ತೆ: ನಾಟಿ ಮಾಡಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆಲಮಂಗಲ: ತಾಲ್ಲೂಕಿನ ಮಾಚೋನಾಯಕನಹಳ್ಳಿ ಮತ್ತು ನರಸಿಂಹಯ್ಯನಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಈಚಗೆ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಹಾಳಾಗಿದ್ದು, ಕೆಸರುಗದ್ದೆಯಂತಾಗಿದೆ. ಈ ರಸ್ತೆ ದುರಸ್ತಿಗೆ ಆಗ್ರಹಿಸಿ, ಸೋಮವಾರ ರೈತರು ವಿನೂತನವಾಗಿ ಪ್ರತಿಭಟಿಸಿದರು. 

ರಸ್ತೆಯ ಕೆಸರಿನಲ್ಲಿ ಬಿದ್ದು ಒದ್ದಾಡಿದ ಗ್ರಾಮಸ್ಥರು, ನಂತರ ರಾಗಿ ಪೈರನ್ನು ನಾಟಿ ಮಾಡಿ ಆಕ್ರೋಶ ಹೊರಹಾಕಿದರು. ಕೆಸರು ಮೆತ್ತಿಕೊಂಡ ಮೈಯಲ್ಲೇ ಬೂದಿಹಾಳ್ ಪಂಚಾಯತಿಗೆ ತೆರಳಿ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತಾಧಿಕಾರಿಗಳ ಎದುರಿನ ಕುರ್ಚಿಯಲ್ಲಿ ಕುಳಿತು ರಸ್ತೆ ನಿರ್ಮಿಸಿಕೊಡಿ ಎಂದು ಒತ್ತಾಯಿಸಿದರು. 

‘ನರಸಿಂಹಯ್ಯನಪಾಳ್ಯದ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಹಲವು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಮಾಚೋನಾಯನಹಳ್ಳಿಯ ಗೃಹ ಮಂಡಳಿಯ ಬಡಾವಣೆ ಅಭಿವೃದ್ಧಿ ಕೆಲಸವೂ ನಡೆಯುತ್ತಿದೆ. ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಆದರೆ, ದುರಸ್ತಿಯೇ ಮಾಡಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ
ವ್ಯಕ್ತಪಡಿಸಿದರು. 

ಮುಖಂಡ ಹನುಮಂತರಾಜು, ‘ರೈತರು ಹಾಲನ್ನು ಡೇರಿಗೆ ಹಾಕಲು, ವಿದ್ಯಾಥಿರ್ಗಳು ಶಾಲೆಗೆ ಹೋಗಲು ಮತ್ತು ಎಲ್ಲ ಗ್ರಾಮಸ್ಥರು ನೆಲಮಂಗಲ ಪಟ್ಟಣ ಮತ್ತು ದೊಡ್ಡಬಳ್ಳಾಪುರಕ್ಕೆ ಹೋಗಲು ಇದೇ ರಸ್ತೆಯಲ್ಲಿ ಸಂಚರಿಸಬೇಕು. ಅಧಿಕಾರಿಗಳಿಗೆ, ಎಲ್ಲ ಜನಪ್ರತಿನಿಧಿಗಳಿಗೆ ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲ’ ಎಂದರು. 

‘ಶೀಘ್ರವಾಗಿ ಉತ್ತಮ ಗುಣಮಟ್ಟದ ನಿರ್ಮಿಸಿಕೊಡಬೇಕು. ಇಲ್ಲವಾದರೆ ಪಂಚಾಯತಿ ಕಚೇರಿ ಎದುರೇ ಗ್ರಾಮಸ್ಥರೆಲ್ಲ ವಾಸ್ತವ್ಯ ಹೂಡಿ ಉಗ್ರ ಪ್ರತಿಭಟನೆ ಮಾಡುತ್ತೇವೆ’ ಎಂದು ಗ್ರಾಮಸ್ಥ ಲೋಕೇಶ್‌ ಎಚ್ಚರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು