ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಬೆಂಬಲ: ರೈತ ಹೋರಾಟಗಾರರ ಬಂಧನ

Last Updated 26 ಮಾರ್ಚ್ 2021, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಕಿಸಾನ್ ಮೋರ್ಚಾ ಕರೆ ನೀಡಿದ್ದ ಬಂದ್‌ಗೆ ಬೆಂಬಲವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದರು.

ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ನಗರದ ಪುರಭವನದ ಬಳಿ ಮಸೂದೆಗಳ ಶವಯಾತ್ರೆ ಮೂಲಕ ಹೋರಾಟ ನಡೆಸಲು ರೈತರು ಮುಂದಾದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಜಿ.ಸಿ. ಬಯ್ಯಾರೆಡ್ಡಿ, ಎಸ್. ವರಲಕ್ಷ್ಮಿ, ಗೋಪಾಲ್, ಹನುಮೇಶ್, ಕುಮಾರ್ ಸಮತಲ, ಅಣ್ಣಪ್ಪ, ಕೆ.ಎಸ್. ವಿಮಲಾ, ಸುರೇಂದ್ರ ರಾವ್, ಸಚಿನ್ ಮಿಗಾ, ವೆಂಕಟೇಶ್ ಸೇರಿ ನೂರಾರು ಕಾರ್ಯಕರ್ತರು ಟೌನ್‌ಹಾಲ್ ಮುಂಭಾಗಕ್ಕೆ ಬಂದ ಕೂಡಲೇ ಪೊಲೀಸರು ವಶಕ್ಕೆ ಪಡೆದರು.

‘ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ಹೋರಾಟಗಾರರನ್ನು ಬಂಧಿಸಲಾಗಿದೆ. ಪೊಲೀಸ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡುತ್ತಿದ್ದಾರೆ’ ಎಂದು ಹೋರಾಟಗಾರರು ದೂರಿದರು.

‘ಕೇಂದ್ರ ಸರ್ಕಾರಕ್ಕೆ ಶ್ರೀಸಾಮಾನ್ಯರ ಗೋಳು ತಿಳಿಯುತ್ತಿಲ್ಲ. ನಾನು ನಡೆದಿದ್ದೇ ಸರಿ ಎಂಬ ರೀತಿಯಲ್ಲಿ ದುರ್ವರ್ತನೆ ತೋರಿಸುತ್ತಿದೆ. ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಅನೇಕ ರೀತಿಯ ತಂತ್ರಗಳನ್ನು ಹೆಣೆಯುತ್ತಿದೆ. ಮುಂದಿನ ದಿನಗಳಲ್ಲಿ ಜನ ಬುದ್ದಿ ಕಲಿಸಲಿದ್ದಾರೆ’ ಎಂದರು.

‘ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದೆ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಎಲ್ಲರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ರೈತ ಮುಖಂಡರನ್ನು ಮಾತುಕತೆಗೆ ಕರೆದು ಹೊಸ ಕೃಷಿ ಕಾಯ್ದೆಗಳನ್ನು ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ’ ಎಂದು ಎಚ್ಚರಿಸಿದರು.

ಈರುಳ್ಳಿ ಮಾರಾಟ ಮಾಡಿದ ವಾಟಾಳ್

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ‘ಅಗತ್ಯ ವಸ್ತುಗಳ ಬೆಲೆಗಳು ದಿನೇ ದಿನೆ ಗಗನಕ್ಕೇ ಏರುತ್ತಿವೆ. ಬಡವರು ಅಡುಗೆ ಅನಿಲ ಖರೀದಿ ಮಾಡಲಾಗದ ಸ್ಥಿತಿ ಎದುರಾಗಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಾದ ಸರ್ಕಾರ ಕೈಚೆಲ್ಲಿ ಕುಳಿತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸೂರ್ಯಕಾಂತಿ ಎಣ್ಣೆ, ಬೇಳೆ ಸೇರಿ ಎಲ್ಲ ವಸ್ತುಗಳು ದುಬಾರಿಯಾಗಿವೆ. ಶ್ರೀಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT