ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿ ರೈತರು ವಶಕ್ಕೆ: ಸಿ.ಎಂ ಮನೆ ಮುತ್ತಿಗೆಗೆ ರೈತ ಸಂಘ ಯತ್ನ

Last Updated 12 ಜುಲೈ 2022, 4:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕಬ್ಬಿನ ಬೆಲೆಯನ್ನು ಟನ್‌ಗೆ ₹ 4,500 ನಿಗದಿ ಮಾಡಬೇಕು’ ಎನ್ನುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು ನಗರದ ರೈಲು ನಿಲ್ದಾಣದಲ್ಲೇ ಪೊಲೀಸರು ಸೋಮವಾರ ವಶಕ್ಕೆ ಪಡೆದರು.

ರೈತರ ಬೇಡಿಕೆ ಈಡೇರಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ರಾಜ್ಯ ರೈತ ಸಂಘ ಕರೆ ನೀಡಿತ್ತು. ಮಂಡ್ಯ, ರಾಮನಗರ, ಮೈಸೂರು, ಬೆಳಗಾವಿ, ಧಾರವಾಡ ಸೇರಿ ರಾಜ್ಯದ ಹಲವು ಜಿಲ್ಲೆಗಳ ರೈತರು ರೈಲು ಮೂಲಕ ಬೆಂಗಳೂರಿಗೆ ಸೋಮವಾರ ಬೆಳಿಗ್ಗೆ ಬಂದಿಳಿದಿದ್ದರು.

‘ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಆಗುತ್ತಿರುವ ವಂಚನೆಗೆ ಕಡಿವಾಣ ಹಾಕಬೇಕು. ಬಾಕಿ ಹಣವನ್ನೂ ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು. ನಾಲ್ಕು ವರ್ಷಗಳಿಂದ ಕಬ್ಬು ಬೆಳೆಗಾರರಿಗೆ ಎಸ್‌ಎಪಿ ಸಂದಾಯವಾಗಿಲ್ಲ. ಈ ಬಗ್ಗೆ ಗಮನಹರಿಸಬೇಕು. ಗೃಹ ವಿದ್ಯುತ್ ಬಾಕಿ ವಸೂಲಿಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

50 ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್‌ಗಳಲ್ಲಿ ಆಡುಗೋಡಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು. ಕೆಲ ಹೊತ್ತಿನ ನಂತರ ಮುಚ್ಚಳಿಕೆ ಬರೆಸಿಕೊಂಡು ಎಲ್ಲರನ್ನೂ ಬಿಟ್ಟು ಕಳುಹಿಸಿದರು.

‘ಮಂಡ್ಯಕ್ಕೆ ಬಂದಾಗ ಶಕ್ತಿ ಪ್ರದರ್ಶನ’

‘ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯತ್ನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ‘ಮುಖ್ಯಮಂತ್ರಿ ಅವರೇ ಕಾವೇರಿ ನದಿಗೆ ಬಾಗಿನ ಅರ್ಪಿಸಲು ಮಂಡ್ಯಕ್ಕೆ ಬರಲೇಬೇಕು. ಆಗ ಕಪ್ಪು ಬಾವುಟ ಪ್ರದರ್ಶಿಸಿ ಶಕ್ತಿ ತೋರಿಸುತ್ತೇವೆ’ ಎಂದು ಗುಡುಗಿದರು.

‘ನೋವು ಹೇಳಿಕೊಳ್ಳಲು ಬಂದರೆ, ನಮ್ಮ ಮೇಲೆಯೇ ಪೊಲೀಸ್ ಬಲ ಪ್ರಯೋಗ ಮಾಡಿಸುತ್ತೀರಾ? ಮಂಡ್ಯಕ್ಕೆ ಬಂದಾಗ ಸಾವಿರಾರು ರೈತರು ಸೇರುತ್ತೇವೆ. ಅಲ್ಲಿ ಪೊಲೀಸರನ್ನು ಕರೆಸಿ ನಮ್ಮನ್ನು ಬಂಧಿಸಿ ನೋಡೋಣ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT