ಭಾನುವಾರ, ಫೆಬ್ರವರಿ 16, 2020
31 °C

ಮಳೆ ಬಂದರೆ ಮುಳುಗಡೆ ಭಯ

ವಿಜಯಕುಮಾರ್‌ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆ ಬಂದಾಗ ರಸ್ತೆ ಮತ್ತು ಮನೆಗಳಲ್ಲಿ ತುಂಬಿಕೊಳ್ಳುವ ಕೆಸರು ನೀರು, ಕೆರೆಗಳಿಗೆ ಸೇರುವ ಮಲದ ಗುಂಡಿಯ ಕಶ್ಮಲ ನೀರು, ಸಂಚಾರವೇ ದುಸ್ತರ ಎಂಬಂತಿರುವ ಕಿರಿದಾದ ರಸ್ತೆಗಳು... ಇದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಿ, ಪುಟ್ಟೇನಹಳ್ಳಿ, ಅರಕೆರೆ ಮತ್ತು ಬೊಮ್ಮನಹಳ್ಳಿ ವಾರ್ಡ್‌ಗಳ ಸ್ಥಿತಿ. ಈ ನಾಲ್ಕು ವಾರ್ಡ್‌ಗಳ ಚಿತ್ರಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಅರಕೆರೆ–193

ಮೈಕೋ ಲೇಔಟ್‌, ಸಿಂಡಿಕೇಟ್ ಬ್ಯಾಂಕ್ ಲೇಔಟ್, ಓಂಕಾರನಗರ, ಶಾಂತಿನಿಕೇತನ, ಕೃಷ್ಣ ಲೇಔಟ್, ಅರಕೆರೆ, ಆರ್.ಆರ್. ಲೇಔಟ್‌, ಸರಸ್ವತಿಪುರ, ಅವನಿ ಶೃಂಗೇರಿ ಬಡಾವಣೆಗಳನ್ನು ಈ ವಾರ್ಡ್‌ ಒಳಗೊಂಡಿದೆ. ಕಸ ನಿವರ್ಹಣೆ, ಕುಡಿಯುವ ನೀರಿನ ಸಮಸ್ಯೆ ಈ ವಾರ್ಡ್‌ನಲ್ಲಿ ಅಷ್ಟಾಗಿ ಇಲ್ಲ. ರಸ್ತೆ ಅಭಿವೃದ್ಧಿ ಮತ್ತು ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡಿವೆ.

ಶಾಂತಿನಿಕೇತನ, ಅವನಿ ಶೃಂಗೇರಿ ಬಡಾವಣೆ ಹಾಗೂ ಬಿಡಿಎ ಬಡಾವಣೆಗಳಲ್ಲಿ ಮಳೆ ಬಂದರೆ ಪ್ರವಾಹ ಉಂಟಾಗುವುದು ಮಾಮೂಲಿ. ಇಲ್ಲಿನ ಜನ ಮಳೆ ಬಂದಾಗಲೆಲ್ಲ ಆತಂಕಕ್ಕೊಳಗಾಗುತ್ತಾರೆ. ಈ ಬಡಾವಣೆಯ ರಾಜಕಾಲುವೆ ದುರಸ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಹದ ಸಮಸ್ಯೆ ಎದುರಾಗುವುದಿಲ್ಲ ಎಂದು ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ ಅವರ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಈ ವಾರ್ಡ್‌ನಲ್ಲಿರುವ ದೊಡ್ಡ ಕೆರೆ ಅಭಿವೃದ್ಧಿಯಾಗದೆ ಕೊಳಚೆ ನೀರಿನಿಂದ ತುಂಬಿಕೊಂಡಿದೆ. ಬಿಬಿಎಂಪಿಯ ಪ್ರಾಥಮಿಕ ಶಾಲೆ ಈ ವಾರ್ಡ್‌ನಲ್ಲಿದ್ದು, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಜನರಿಂದ ಬೇಡಿಕೆ ಇದೆ. ಸದ್ಯ ಸರ್ಕಾರಿ ಕಾಲೇಜು ಇಲ್ಲದ ಕಾರಣ ಕಡಿಮೆ ಶುಲ್ಕ ಇರುವ ಖಾಸಗಿ ಶಾಲೆಗಳನ್ನು ಜನ ಹುಡುಕುವಂತಾಗಿದೆ.

ಜರಗನಹಳ್ಳಿ–186

ಜರಗನಹಳ್ಳಿ, ಸಾರಕ್ಕಿ ತೋಟ, ರಾಜಮ್ಮ ಗಾರ್ಡನ್‌, ಕೆ.ಆರ್. ಲೇಔಟ್‌, ಜ್ಯೋತಿ ಲೇಔಟ್‌, ಮುನಿಸ್ವಾಮಪ್ಪ ಲೇಔಟ್‌, ಅಣ್ಣಯಪ್ಪ ಲೇಔಟ್‌, ಚಿಕ್ಕಸ್ವಾಮಪ್ಪ ಲೇಔಟ್‌, ಶಾರದಾ ನಗರ ಬಡಾವಣೆಗಳನ್ನು ಈ ವಾರ್ಡ್ ಹೊಂದಿದೆ.

ರಸ್ತೆ, ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ, ಕೆ.ಆರ್‌. ಲೇಔಟ್‌ನ 9ನೇ ಅಡ್ಡ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಾಗಿ ಅಗೆದು ಬಿಟ್ಟಿರುವ ಗುಂಡಿ ಒಂದು ತಿಂಗಳಿಂದ ಹಾಗೇ ಇದೆ. ಪಕ್ಕದಲ್ಲೇ ಶಾಲೆ ಇದ್ದು, ಮಕ್ಕಳು ಅದನ್ನು ದಾಟಿಕೊಂಡೇ ಓಡಾಡುತ್ತಿದ್ದಾರೆ. ದೂಳುಮಯವಾಗಿರುವ ಈ ರಸ್ತೆಯಲ್ಲಿ ಉಸಿರು ಬಿಗಿ ಹಿಡಿದು ಓಡಾಡುವ ಸ್ಥಿತಿ ಇದೆ.

ಸಾರಕ್ಕಿ ಕೆರೆಯ ಒಂದು ಭಾಗ ಈ ವಾರ್ಡ್‌ ವ್ಯಾಪ್ತಿಯಲ್ಲಿದೆ. ಈ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಜರಗನಹಳ್ಳಿ ಕಡೆಗೆ ಇರುವ ಕೆರೆ ಜಾಗ ಪುಂಡರ ತಾಣವಾಗಿದೆ. ಸಂಜೆಯಾದರೆ ಸೇರುವ ಪಡ್ಡೆ ಹುಡುಗರು ಮದ್ಯದ ಅಮಲಿನಲ್ಲಿ ಗಲಾಟೆ ಎಬ್ಬಿಸುವುದು ಇಲ್ಲಿ ನಿತ್ಯದ ಗೋಳು. ಅಕ್ಕಪಕ್ಕದ ನಿವಾಸಿಗಳು ಸಂಜೆಯಾದರೆ ಹೊರ ಬರಲು ಭಯಪಡುವ ಸ್ಥಿತಿ ಇದೆ ಎನ್ನುತ್ತಾರೆ ಬಡಾವಣೆಯ ಲಕ್ಷ್ಮಮ್ಮ.

ಸಂಚಾರ ದಟ್ಟಣೆ ಈ ವಾರ್ಡ್‌ನ ದೊಡ್ಡ ಸಮಸ್ಯೆ. ಜ್ಯೋತಿ ಲೇಔಟ್‌ನಲ್ಲಿ ಯಲಚೇನಹಳ್ಳಿ ಮೆಟ್ರೊ ರೈಲು ನಿಲ್ದಾಣದಿಂದ ಇಳಿದು ಬರುವ ಪ್ರಯಾಣಿಕರು ಮುಂದೆ ಸಾಗಲು ಜಾಗವಿಲ್ಲದಂತೆ ಆಟೊಗಳು ನಿಲ್ಲುತ್ತಿವೆ. ಸಾರಕ್ಕಿ ಸಿಗ್ನಲ್‌ನಲ್ಲೂ ಸಂಚಾರ ದಟ್ಟಣೆಯದ್ದೇ ಕಿರಿಕಿರಿ. ಒಂದು ಬದಿಯಲ್ಲಿ ರಸ್ತೆಗೇ ವ್ಯಾಪಿಸಿರುವ ಅಂಗಡಿ ಮುಂಗಟ್ಟುಗಳು ಪಾದಚಾರಿಗಳ ಸಂಚಾರಕ್ಕೂ ಅವಕಾಶ ಇಲ್ಲದಂತೆ ಮಾಡಿವೆ.

ಬೊಮ್ಮನಹಳ್ಳಿ–175

ರೂಪೇನ ಅಗ್ರಹಾರ, ಬೊಮ್ಮನಹಳ್ಳಿ, ದೇವರ ಚಿಕ್ಕನಹಳ್ಳಿ ಮತ್ತು ಬಿಟಿಎಂ 4ನೇ ಹಂತ ಬಡಾವಣೆಗಳು ಬೊಮ್ಮನಹಳ್ಳಿ ವಾರ್ಡ್‌ನಲ್ಲಿವೆ.

ಮೂರು ವರ್ಷಗಳ ಹಿಂದೆ ಮಳೆ ನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಸಮಸ್ಯೆ ಮರುಕಳಿಸುವುದನ್ನು ತಪ್ಪಿಸಲು ರಾಜಕಾಲುವೆ ಅಭಿವೃದ್ಧಿ ಮಾಡಲಾಗಿದೆ ಎನ್ನುತ್ತಾರೆ ಈ ವಾರ್ಡ್‌ನ ಪಾಲಿಕೆ ಸದಸ್ಯ ರಾಮಮೋಹನರಾಜು. ರಸ್ತೆ, ಕುಡಿಯುವ ನೀರು ಮತ್ತು ಕಸ ನಿರ್ವಹಣೆ ಸಮಸ್ಯೆ ಈ ಬಡಾವಣೆಯಲ್ಲಿ ಅಷ್ಟಾಗಿ ಇಲ್ಲ. ಕೆಲವೆಡೆ ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು ತಪ್ಪಿಲ್ಲ.

ಬೊಮ್ಮನಹಳ್ಳಿಯಿಂದ ಬೇಗೂರು ರಸ್ತೆ ಮತ್ತು ದೇವರ ಚಿಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಸಂಚಾರವೇ ದುಸ್ತರವಾಗಿದೆ. ಈ ಎರಡೂ ರಸ್ತೆಗಳಲ್ಲಿ ಸಂಚರಿಸುವುದೆಂದರೆ ಹರಸಾಹಸದ ಕೆಲಸ. ರಸ್ತೆ ವಿಸ್ತರಣೆ ಆಗದ ಹೊರತು ಸಮಸ್ಯೆಗೆ ಪರಿಹಾರ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಪುಟ್ಟೇನಹಳ್ಳಿ–187

ದೊರೆಸಾನಿಪಾಳ್ಯ, ಪುಟ್ಟೇನಹಳ್ಳಿ, ವಿನಾಯಕನಗರ, ರಾಮಯ್ಯ ಗಾರ್ಡನ್, ವೆಂಕಟಾದ್ರಿ ಲೇಔಟ್, ಜೆ.ಪಿ. ನಗರ 5ನೇ ಹಂತ, ಸಿಲ್ವರ್ ಓಕ್ ಬಡಾವಣೆಗಳನ್ನು ಈ ವಾರ್ಡ್‌ ಒಳಗೊಂಡಿದೆ.

ಗಾತ್ರದಲ್ಲಿ ಚಿಕ್ಕದಾದ ಈ ವಾರ್ಡ್‌ನಲ್ಲಿ ಕಸ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆಗಳು ಅಷ್ಟಾಗಿ ಇಲ್ಲ.  ಸಿಲ್ವರ್ ಓಕ್ ಬಡಾವಣೆಯಲ್ಲಿ ಒಳಚರಂಡಿ ಸಮಸ್ಯೆ ಇದೆ. ಹೊಸದಾಗಿ ಒಳಚರಂಡಿ ಪೈಪ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.

ಪುಟ್ಟೇನಹಳ್ಳಿ ನೇಬರ್‌ಹುಡ್‌ ಕೆರೆಯಲ್ಲಿ ಬೆಳೆದು ನಿಂತಿರುವ ಕಳೆ ಸ್ವಚ್ಛಗೊಳಿಸುವ ಕೆಲಸವನ್ನು ಕೆರೆ ಅಭಿವೃದ್ಧಿ ಟ್ರಸ್ಟ್‌ ನಿರ್ವಹಿಸುತ್ತಿದೆ. ಆದರೆ, ಕೆರೆಗೆ ಶೌಚಗುಂಡಿ ನೀರು ಹರಿದು ಬರುವುದು ತಪ್ಪಿಲ್ಲ ಎನ್ನುತ್ತಾರೆ ಸ್ಥಳೀಯರು.

ಪಾಲಿಕೆ ಸದಸ್ಯರು ಏನಂತಾರೆ

ಪ್ರವಾಹ ತಪ್ಪಿಸಲು ₹35 ಕೋಟಿ ಅನುದಾನದಲ್ಲಿ ರಾಜಕಾಲುವೆ ಅಭಿವೃದ್ಧಿಪಡಿಸಲಾಗಿದೆ. ಈಗಿನ ಸರ್ಕಾರ ₹40 ಕೋಟಿ ಅನುದಾನ ನೀಡಿದೆ. ಅಲ್ಲದೇ ಪ್ರವಾಹದಿಂದ ಉಂಟಾದ ಹಾನಿ ಸರಿಪಡಿಸಲು ₹28 ಕೋಟಿ ಅನುದಾನ ಮಂಜೂರಾಗಿದೆ. ಬಿಬಿಎಂಪಿ ಅನುದಾನ ಸೇರಿ ನಾಲ್ಕೂವರೆ ವರ್ಷಗಳಲ್ಲಿ ₹100 ಕೋಟಿ ಅನುದಾನ ದೊರೆತಂತಾಗಿದೆ. ನಾಲ್ಕು ವರ್ಷಗಳಿಂದ ಆಗದಿರುವ ಕೆಲಸ ಈಗ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆ ಉದ್ಘಾಟನೆಗೆ ಅಣಿಯಾಗಿದೆ. ಬಿಬಿಎಂಪಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನ ನಡೆಸುತ್ತಿದ್ದೇನೆ

ಭಾಗ್ಯಲಕ್ಷ್ಮಿ ಮುರಳಿ, ಅರಕೆರೆ ವಾರ್ಡ್‌ನ ಪಾಲಿಕೆ ಸದಸ್ಯೆ

***

ವಾರ್ಡ್‌ನಲ್ಲಿ ನಾಲ್ಕು ವರ್ಷಗಳ ಹಿಂದೆ ಇದ್ದ ಸಮಸ್ಯೆಗಳು ಈಗ ಇಲ್ಲ. ಜ್ಯೋತಿ ಲೇಔಟ್‌ ಮತ್ತು ಸಾರಕ್ಕಿ ಸಿಗ್ನಲ್ ಬಳಿ ಸಂಚಾರ ದಟ್ಟಣೆ ಬಗ್ಗೆ ಪೊಲೀಸರ ಗಮನಕ್ಕೆ ತರಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ₹10 ಕೋಟಿ ಅನುದಾನದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ₹5 ಕೋಟಿ ಅನುದಾನ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಬಾಕಿ ಇದೆ. ಸಾರಕ್ಕಿ ಕೆರೆ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ಕೆರೆ ಬಳಿ ನಡಿಗೆ ಪಥ, ಯೋಗ ಕೇಂದ್ರ, ಅಲ್ಲಲ್ಲಿ ಆಸನ ಕಲ್ಪಿಸುವ ಉದ್ದೇಶ ಇದೆ

–ಬಿ.ಎಂ. ಶೋಭಾ ಮುನಿರಾಮ್, ಜರಗನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯೆ

***

ಸ್ಟೋನ್ ಪಾರ್ಕ್‌, ಕಾರ್‌ ಪಾರ್ಕ್, ಆರ್‌ಎಂಆರ್ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ. ಒಳಾಂಗಣ ಕ್ರೀಡಾಂಗಣವನ್ನೂ ನಿರ್ಮಿಸಲಾಗಿದೆ. ಇನ್ನೂ ನಾಲ್ಕು ಉದ್ಯಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. 15 ಎಕರೆಯಲ್ಲಿ ನಿರ್ಮಿಸಿರುವ ಆಟದ ಮೈದಾನ 3 ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ನನ್ನ ಅವಧಿಯಲ್ಲಿ ಈವರೆಗೆ ₹60 ಕೋಟಿ ಅನುದಾನ ತಂದು ವಾರ್ಡ್‌ ಅಭಿವೃದ್ಧಿ ಮಾಡಿದ್ದೇನೆ. ಬೊಮ್ಮನಹಳ್ಳಿ–ಬೇಗೂರು ರಸ್ತೆ ವಿಸ್ತರಣೆ ಸದ್ಯದಲ್ಲೇ ಆಗಲಿದೆ. ಎರಡನೇ ಹಂತದಲ್ಲಿ ದೇವರಚಿಕ್ಕನಹಳ್ಳಿ ರಸ್ತೆ ವಿಸ್ತರಣೆ ಮಾಡಲಾಗುವುದು

–ಸಿ.ಆರ್. ರಾಮ್‌ ಮೋಹನ್ ರಾಜು, ಬೊಮ್ಮನಹಳ್ಳಿ ವಾರ್ಡ್ ಪಾಲಿಕೆ ಸದಸ್ಯ

ಪುಟ್ಟೇನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯೆ ಆರ್. ಪ್ರಭಾವತಿ ರಮೇಶ್ ಅವರನ್ನು ಸಂಪರ್ಕಿಸಿದಾಗ ಮರುದಿನ ಕರೆ ಮಾಡುವುದಾಗಿ ತಿಳಿಸಿದರು. ಎರಡು ದಿನ ಕಳೆದರೂ ಕರೆ ಮಾಡಲಿಲ್ಲ, ಕರೆ ಮಾಡಿದರೂ ಸ್ವೀಕರಿಸಲಿಲ್ಲ

ಜನ ಏನಂತಾರೆ

ಅರಕೆರೆ ವಾರ್ಡ್‌ನಲ್ಲಿರುವ ದೊಡ್ಡ ಕೆರೆ ಅಭಿವೃದ್ಧಿಯಾಗ‌ದೆ ಕೊಳಚೆ ನೀರಿನಿಂ‌ದ ತುಂಬಿ ಹೋಗಿದೆ. ಕಟ್ಟಡದ ಅವಶೇಷ, ಕಸ ಎಸೆಯುವ ತಾಣವೂ ಆಗಿ ಮಾರ್ಪಟ್ಟಿದೆ. ಕೆರೆ ಅಭಿವೃದ್ಧಿಪಡಿಸಿದರೆ ಪಾದಚಾರಿಗಳ ವಾಯುವಿಹಾರಕ್ಕೆ ಅನುಕೂಲವಾಗಲಿದೆ

ಎಸ್‌.ರವಿಕುಮಾರ್‌, ಅರಕೆರೆ ವಾರ್ಡ್‌

ಕೆ.ಆರ್‌. ಲೇಔಟ್‌ನ 9ನೇ ಅಡ್ಡ ರಸ್ತೆಯನ್ನು ಅಗೆದು ಒಂದು ತಿಂಗಳಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ದೂಳಿನಲ್ಲಿ ಜೀವನ ಕಳೆಯುವಂತಾಗಿದೆ. ಕೂಡಲೇ ಸರಿಪಡಿಸುವ ಕೆಲಸ ಆಗಬೇಕು

ಭುವನ್, ಕೆ.ಆರ್.ಲೇಔಟ್

ಹೊಸೂರು ರಸ್ತೆಯಿಂದ ಬೇಗೂರು ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಸಂಚರಿಸುವುದು ಸಾಹಸದ ಕೆಲಸ. ದೇವರಚಿಕ್ಕನಹಳ್ಳಿ ರಸ್ತೆ ಕೂಡ ಕಿರಿದಾಗಿದ್ದು, ಕೂಡಲೇ ರಸ್ತೆ ವಿಸ್ತರಣೆ ಮಾಡದಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ

ಗೌತಮ್, ಬೊಮ್ಮನಹಳ್ಳಿ

ಸಿಲ್ವರ್ ಓಕ್ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಮುಖ್ಯ ರಸ್ತೆಯಿಂದ ಸಂಪರ್ಕಕ್ಕೆ ಇರುವ ಪ್ರಮುಖ ಮತ್ತು ಏಕೈಕ ರಸ್ತೆ ಇದಾಗಿದೆ. ಹೀಗಾಗಿ ತ್ವರಿತವಾಗಿ ಕಾಮಗಾರಿ  ಪೂರ್ಣಗೊಳಿಸಬೇಕು

ಮಂಜುನಾಥ್, ಸಿಲ್ವರ್ ಓಕ್ ಬಡಾವಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು