ಸೋಮವಾರ, ಜನವರಿ 18, 2021
25 °C
ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ‘ಬ್ಲಾಕ್‌’ | ಟಿಸಿ ಕೇಳಿದರೂ ಕೊಡದ ಶಾಲೆಗಳು

ಶುಲ್ಕ ಕಟ್ಟದಿದ್ದರೆ ‘ಟಿಸಿ’ ಕೊಡುವ ಬೆದರಿಕೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನ್‌ಲೈನ್‌ ಕ್ಲಾಸ್‌–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಶಾಲಾ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ (ಟಿಸಿ) ನೀಡುವುದಾಗಿ ನಗರದ ಕೆಲವು ಖಾಸಗಿ ಶಾಲೆಗಳು ಪೋಷಕರನ್ನು ಬೆದರಿಸುತ್ತಿವೆ. ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಯಿಂದ ‘ಬ್ಲಾಕ್’ ಮಾಡುತ್ತಿವೆ. ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷದ ಮೊದಲ ಕಂತಿನ ಶುಲ್ಕವನ್ನು ಪಾವತಿಸುವಂತೆಯೂ ಒತ್ತಡ ಹೇರುತ್ತಿವೆ.

ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಯನ್ನು ಏ.15ರಿಂದಲೇ ಪ್ರಾರಂಭಿಸುತ್ತಿದ್ದೇವೆ. ನಿಮ್ಮ ಮಗ ಅಥವಾ ಮಗಳು ಇದೇ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಎಂಧು ನೀವು ಬಯಸುವುದಾದರೆ, ಜ.15ರೊಳಗೆ ಒಪ್ಪಿಗೆ ಪತ್ರ ನೀಡಿ. ಇಲ್ಲದಿದ್ದರೆ ಟಿಸಿಗಾಗಿ ಅರ್ಜಿ ಸಲ್ಲಿಸಿ’ ಎಂದು ನಗರದ ಪ್ರತಿಷ್ಠಿತ ಶಾಲೆಯೊಂದು ಪೋಷಕರಿಗೆ ಸೂಚನೆ ನೀಡಿದೆ.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುವುದಾದರೆ, ಮುಂದಿನ ತರಗತಿಯ ಶುಲ್ಕದ ಮೊದಲ ಕಂತನ್ನು ಜ.15ರೊಳಗೆ ಪಾವತಿಸಬೇಕು ಎಂದು ಒತ್ತಡ ಹೇರಿದೆ. ಈ ಕುರಿತು ಪೋಷಕರಿಗೆ ಶಾಲೆಯು ಕಳುಹಿಸಿದ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

‘ಈ ವರ್ಷದಲ್ಲಿ ಶುಲ್ಕದ ಎರಡನೇ ಕಂತು ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಯಿಂದ ಬ್ಲಾಕ್‌ ಮಾಡಲಾಗುತ್ತಿದೆ. ಶುಲ್ಕ ಪಾವತಿಸಲು ಕಾಲಾವಕಾಶ ನೀಡಿ ಎಂದು ಮನವಿ ಮಾಡಿಕೊಂಡರೂ ತರಗತಿಗೆ ಹಾಜರಾಗಲು ಮಕ್ಕಳಿಗೆ ಅವಕಾಶ ನೀಡುತ್ತಿಲ್ಲ’ ಎಂದು ಪೋಷಕರು ದೂರಿದರು.

ಶುಲ್ಕ ಪಾವತಿಸಿ ಟಿಸಿ ಒಯ್ಯಿರಿ:

‘ಓಲಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ನನಗೆ ಲಾಕ್‌ಡೌನ್‌ ವೇಳೆಯಲ್ಲಿ ಸರಿಯಾಗಿ ಆದಾಯ ಬರಲಿಲ್ಲ. ಮನೆ ಬಾಡಿಗೆ ಕಟ್ಟುವುದೂ ಕಷ್ಟವಾಗಿದೆ. ಕೋಲಾರಕ್ಕೆ ಬಂದು ನೆಲೆಸಿದ್ದೇವೆ. ಮಕ್ಕಳನ್ನು ಇಲ್ಲಿಯೇ ಸೇರಿಸಬೇಕು ಎಂದು ನಿರ್ಧರಿಸಿದ್ದೇವೆ. ಆದರೆ, ಇಬ್ಬರು ಮಕ್ಕಳು ಬೆಂಗಳೂರಿನ ಎಚ್‌ಎಎಲ್‌ ಬಳಿಯ ಎಲ್‌.ಬಿ. ಶಾಸ್ತ್ರಿ ನಗರದಲ್ಲಿರುವ ಪ್ರೆಸಿಡೆನ್ಸಿ ಚರ್ಚ್‌ ಶಾಲೆಯಲ್ಲಿ ಓದುತ್ತಿದ್ದರು. ಇಬ್ಬರು ಮಕ್ಕಳ ಶುಲ್ಕವನ್ನು ಪಾವತಿಸಲು ಆಗಿಲ್ಲ. ಎರಡು ಕಂತು ಹಣ ಸೇರಿ ₹3 ಲಕ್ಷ ಕಟ್ಟಬೇಕಾಗಿದೆ’ ಎಂದು ಪೋಷಕ ವೆಂಕಪ್ಪ ಹೇಳಿದರು. 

‘ಪೂರ್ತಿ ಶುಲ್ಕ ಕಟ್ಟುವವರೆಗೆ ಟಿಸಿ ಕೊಡುವುದಿಲ್ಲ ಎಂದು ಶಾಲೆಯವರು ಹೇಳುತ್ತಿದ್ದಾರೆ. ಟಿಸಿ ಇಲ್ಲದೆ ಬೇರೆ ಶಾಲೆಗೆ ಮಕ್ಕಳನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ದುಡಿಮೆ ಇಲ್ಲದಿರುವುರಿಂದ ಶುಲ್ಕ ಪಾವತಿಸಲೂ ಆಗುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರೆಸಿಡೆನ್ಸಿ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಡಿಪಿಐ ಅವರೂ ಸಂಪರ್ಕಕ್ಕೆ ಸಿಗಲಿಲ್ಲ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು