ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲೇ ‘ಚಿತ್ರನಗರಿ’

ಚಿತ್ರರಂಗ ಒಪ್ಪಿದರೆ 150 ಎಕರೆಯಲ್ಲಿ ಕಾಮಗಾರಿಗೆ ಚಾಲನೆ –ಮುಖ್ಯಮಂತ್ರಿ ಯಡಿಯೂರಪ್ಪ
Last Updated 12 ಮಾರ್ಚ್ 2020, 22:57 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರನಗರಿ ಸ್ಥಾಪನೆಗೆ ನಗರದಲ್ಲಿ 150 ಎಕರೆ ಜಾಗವನ್ನು ಗುರುತಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಜಯಮಾಲಾ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಈ ಜಾಗಕ್ಕೆ ಏಪ್ರಿಲ್‌ ತಿಂಗಳ ಆರಂಭದಲ್ಲಿ ಚಿತ್ರೋದ್ಯಮದ ಗಣ್ಯರನ್ನು ಕರೆದುಕೊಂಡು ಹೋಗುತ್ತೇನೆ. ಎಲ್ಲರೂ ಸಮ್ಮತಿಸಿದರೆ ಅಲ್ಲಿ ಈ ವರ್ಷವೇ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

‘ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷದ ಆಯವ್ಯಯದಲ್ಲಿ ₹ 500 ಕೋಟಿ ಮೀಸಲಿಟ್ಟಿದ್ದೇನೆ. ಚಿತ್ರೋದ್ಯಮದ ಬೇಡಿಕೆಗಳಿಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ’ ಎಂದೂ ಹೇಳಿದರು.

‘ಹೆಸರುಘಟ್ಟದಲ್ಲಿ ಚಿತ್ರನಗರಿಗಾಗಿ ಮೀಸಲಿಟ್ಟ 347.12 ಎಕರೆ ಗೋಮಾಳ ಜಮೀನು ಪಶುಸಂಗೋಪನಾ ಇಲಾಖೆಗೆ ಸೇರಿದ್ದು, ಈ ಪ್ರದೇಶ ಹಸಿರುವಲಯ ವ್ಯಾಪ್ತಿಗೆ ಸೇರಿದ್ದರಿಂದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಆದೇಶ ನೀಡಿದೆ. ಹೀಗಾಗಿ, ಈ ಭೂಮಿಯನ್ನು ಮೈಸೂರು ಚಲನಚಿತ್ರ ಅಭಿವೃದ್ಧಿ ನಿಗಮಕ್ಕೆ 99 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಿದ್ದ ಕರಾರು ರದ್ದುಪಡಿಸಿ ಪಶುಸಂಗೋಪನಾ ಇಲಾಖೆ ಸುಪರ್ದಿಗೆ ಹಿಂಪಡೆಯಲಾಗಿದೆ’ ಎಂದು ಮುಖ್ಯಮಂತ್ರಿ ವಿವರಿಸಿದರು.

ಜೆಡಿಎಸ್‌ನ ಸಂದೇಶ್‌ ನಾಗರಾಜ್‌, ‘ಈಗಾಗಲೇ ಮೈಸೂರು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ಯೋಜನೆಯ ರೂಪರೇಷೆ ಹಾಗೂ ಸಾಧ್ಯತಾ ವರದಿಯನ್ನು ಸಿದ್ಧಪಡಿಸಲು ಸಲಹಾ ಸೇವೆ ಪಡೆದಿದ್ದು, ಅದಕ್ಕಾಗಿ ₹ 36.75 ಲಕ್ಷ ಖರ್ಚು ಮಾಡಲಾಗಿದೆ. ಹೀಗಾಗಿ, ಅಲ್ಲಿಯೇ ಚಿತ್ರನಗರಿ ಸ್ಥಾಪಿಸಬಹುದು’ ಎಂದು ಸಲಹೆ ನೀಡಿದರು.

ಅದಕ್ಕೆ ಮುಖ್ಯಮಂತ್ರಿ, ‘ಹೆಸರುಘಟ್ಟ, ಮೈಸೂರು, ರಾಮನಗರ ಅಥವಾ ತಾತಗುಣಿ ಎಸ್ಟೇಟ್‌ನಲ್ಲಿ ಚಿತ್ರನಗರಿ ಸ್ಥಾಪಿಸುವ ಉದ್ದೇಶ ಇಲ್ಲ. ಈ ಬಗ್ಗೆ ಚರ್ಚೆ ಮಾಡಿದರೆ ಮತ್ತೆ ಗೊಂದಲ ಉಂಟಾಗುತ್ತದೆ’ ಎಂದರು.

2015–16ರಲ್ಲಿ‌ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಯ ಹಿಮ್ಮಾವು ಗ್ರಾಮದ ಬಳಿ 108.08 ಎಕರೆ ಜಮೀನಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ಸ್ಥಾಪಿಸಲು ಯೋಜಿಸಲಾಗಿತ್ತು. ಬಳಿಕ, ಚಿತ್ರೋದ್ಯಮದ ಜೊತೆ ಪ್ರವಾಸೋದ್ಯಮ, ಹೋಟೆಲ್‌ ಮತ್ತಿತರ ಚಟುವಟಿಕೆ ಅಳವಡಿಸಿಕೊಂಡು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಗೆ‌ ವರ್ಗಾಯಿಸಲಾಗಿತ್ತು.

ಈ ಮಧ್ಯೆ, 2018–19ರ ಬಜೆಟ್‌ನಲ್ಲಿ ರಾಮನಗರದಲ್ಲಿ ಚಿತ್ರನಗರಿ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಅದಕ್ಕಾಗಿ ಅಗ್ಯ ಭೂಮಿ ಗುರುತಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮವನ್ನು ಕೋರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT