ಗುರುವಾರ , ಏಪ್ರಿಲ್ 15, 2021
30 °C

‘ಅದಿರು ವ್ಯಾಪಾರದ ಮೇಲಿನ ನಿರ್ಬಂಧ ತೆರವುಗೊಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇ–ಹರಾಜು ಕಾರ್ಯವಿಧಾನದ ಕಾರಣ ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ವ್ಯಾಪಾರದ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸುಮಾರು ₹8 ಸಾವಿರ ಕೋಟಿ ಆದಾಯ ನಷ್ಟವಾಗುತ್ತಿದೆ. ಈ ನಿಬಂಧನೆಗಳನ್ನು ತೆಗೆದುಹಾಕಬೇಕು. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಧ್ಯ ಪ್ರವೇಶಿಸಬೇಕು’ ಎಂದು ಭಾರತೀಯ ಗಣಿ ಉದ್ಯಮಗಳ ಒಕ್ಕೂಟದ (ಫಿಮಿ) ದಕ್ಷಿಣ ವಲಯ ಕೇಂದ್ರ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಫಿಮಿ ದಕ್ಷಿಣ ವಲಯದ ಅಧ್ಯಕ್ಷ ಶಾಂತೇಶ್‌ ಗುರೆಡ್ಡಿ ‘ರಾಜ್ಯದಲ್ಲಿ ಬಳಕೆಯಾಗದೆ ಉಳಿದಿರುವ ಕಬ್ಬಿಣದ ಅದಿರನ್ನು ಉಂಡೆಗಳಾಗಿ (ಪೆಲೆಟ್ಸ್‌) ಮಾರ್ಪಡಿಸಿ ರಫ್ತು ಮಾಡುವ ಸ್ವಾತಂತ್ರ್ಯವನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಟನ್‌ ಅದಿರಿಗೆ ₹11 ಸಾವಿರ ದರ ನಿಗದಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಕೇವಲ ₹4 ಸಾವಿರ ದರ ಇದೆ. ರಾಜ್ಯದಲ್ಲಿ ಅದಿರಿನ ಸಮರ್ಪಕ ಪೂರೈಕೆ ಇದ್ದರೂ ಕೂಡ ಪ್ರತಿ ವರ್ಷ ವಿದೇಶ ಹಾಗೂ ಇತರ ರಾಜ್ಯಗಳಿಂದ ನಿಯಮಿತವಾಗಿ ಅದಿರು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸಮತೋಲನ ತಗ್ಗಿದ್ದು ಅದಿರು ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.

‘ನಿರ್ಬಂಧಗಳಿಂದಾಗಿ ಅದಿರು ಉದ್ಯಮದ ಹೂಡಿಕೆಗೂ ಪೆಟ್ಟು ಬಿದ್ದಿದೆ. ಅನೇಕ ಕಂಪನಿಗಳು ರಾಜ್ಯದಿಂದ ಹೊರಹೋಗುವ ಅಪಾಯವೂ ಇದೆ. ಹಾಗೇನಾದರು ಆದರೆ ದೊಡ್ಡ ಪ‍್ರಮಾಣದ ನಷ್ಟ ಉಂಟಾಗಲಿದೆ’ ಎಂದು ತಿಳಿಸಿದರು.

ಫಿಮಿ ದಕ್ಷಿಣ ವಲಯದ ಸದಸ್ಯರಾದ ಸೌಮಿಕ್‌ ಮಜುಂದಾರ್‌, ರಾಹುಲ್‌ ಹಾಗೂ ಬಸಂತ್‌ ಪೊದ್ದಾರ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು