ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಮಖಂಡಿ ಬಿಜೆಪಿ ಟಿಕೆಟ್ ಆಕಾಂಕ್ಷಿ’

Last Updated 28 ಫೆಬ್ರುವರಿ 2018, 8:50 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗೆ ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರು ನನ್ನನ್ನು ಪರಿಗಣಿಸುವ ವಿಶ್ವಾಸವಿದೆ’ ಎಂದು ಎಂಆರ್‌ಎನ್‌ ನಿರಾಣಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಫೌಂಡೇಶನ್‌ ಮೂಲಕ ನಾನು ಸಮಾಜಸೇವೆಯಲ್ಲಿ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿರುವುದನ್ನು ಹೈಕಮಾಂಡ್‌ ಗಮನಿಸಿದೆ. ನಾನು ಚುನಾವಣೆಗೆ ನಿಲ್ಲಬೇಕು ಎಂಬುದು ಕ್ಷೇತ್ರದ ಜನರ ಒತ್ತಾಯವಾಗಿದೆ’ ಎಂದು ತಿಳಿಸಿದರು.

‘ಇಲ್ಲಿಯವರೆಗೆ ಫೌಂಡೇಶನ್‌ ವತಿಯಿಂದ ಜಮಖಂಡಿ ಉಪವಿಭಾಗದಲ್ಲಿ 60 ಸಾವಿರ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇದರಲ್ಲಿ 8ರಿಂದ 10 ಸಾವಿರ ಮಂದಿಗೆ ಶಸ್ತ್ರಚಿಕಿತ್ಸೆ ನೀಡಲಾಗಿದೆ. ಸಾವಿರಾರು ಮಂದಿ ಯುವಕರಿಗೆ ಸ್ವ–ಉದ್ಯೋಗ ತರಬೇತಿ ನೀಡುವ ಜೊತೆಗೆ ಬ್ಯಾಂಕ್‌ಗಳ ಮೂಲಕ ಸೌಲ, ಸರ್ಕಾರಿ ಸವಲತ್ತುಗಳನ್ನು ಕೊಡಿಸಲು ನೆರವಾಗಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲೂ ಉತ್ತಮ ಛಾಪು ಮೂಡಿಸಿದ್ದೇವೆ. ಇದನ್ನೆಲ್ಲಾ ಪಕ್ಷ ಗಮನಿಸಲಿದೆ’ ಎಂದು ಹೇಳಿದರು.

ಅಣ್ಣನಿಗೆ ಗೊತ್ತಿಲ್ಲ: ‘ನಾನು ಬಿಜೆಪಿ ಟಿಕೆಟ್ ಕೇಳುತ್ತಿರುವ ವಿಚಾರ ಸಹೋದರ ಮುರುಗೇಶ ನಿರಾಣಿ ಅವರಿಗೆ ಗೊತ್ತಿಲ್ಲ. ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಸ್ಪರ್ಧಿಸಲು ಮುಂದಾಗಿರುವೆ ಎಂಬುದನ್ನು ಅವರ ಮೂಲಕವೇ ಮನದಟ್ಟು ಮಾಡುವೆ’ ಎಂದರು.

ಬಂಡಾಯ ಸ್ಪರ್ಧೆ ಇಲ್ಲ: ‘ಜಮಖಂಡಿ ಕ್ಷೇತ್ರದಿಂದ ಶ್ರೀಕಾಂತ್‌ ಕುಲಕರ್ಣಿ, ಸಹೋದರ ಮುರುಗೇಶ ನಿರಾಣಿ ಸೇರಿದಂತೆ ಯಾರಿಗೇ ಟಿಕೆಟ್‌ ಕೊಟ್ಟರೂ ನಾನು ಅವರನ್ನು ಬೆಂಬಲಿಸುವೆ. ಹಾಗೆಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಂಗಮೇಶ, ‘ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ವರದಿ ತರಿಸಿಕೊಂಡು ಹೈಕಮಾಂಡ್ ಟಿಕೆಟ್ ನೀಡಲಿದೆ’ ಎಂದು ತಿಳಿಸಿದರು.

ಮಾದರಿ ಕ್ಷೇತ್ರದ ಭರವಸೆ: ‘ಶಾಸಕನಾಗಿ ಆಯ್ಕೆಯಾದಲ್ಲಿ ಜಮಖಂಡಿಯನ್ನು ಜಿಲ್ಲೆ ಹಾಗೂ ಸಾವಳಗಿಯನ್ನು ತಾಲ್ಲೂಕು ಕೇಂದ್ರವಾಗಿಸುವೆ. ಜಮಖಂಡಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವೆ. ಗಲಗಲಿ ಜಲಾಶಯದ ಎತ್ತರ ಹೆಚ್ಚಿಸಿ 3ರಿಂದ 4 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗುವುದು.

ಏತ ನೀರಾವರಿ ಮೂಲಕ ಕೊಣ್ಣೂರು, ಸಾವಳಗಿ ಭಾಗವನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವೆ. ಏತ ನೀರಾವರಿ ಮೂಲಕ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು ಹಾಗೂ ಜಮಖಂಡಿಯನ್ನು ಮಾದರಿ ಗ್ರಾಮವಾಗಿ ರೂಪಿಸುವೆ’ ಎಂದು ಸಂಗಮೇಶ ನಿರಾಣಿ ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಿ.ಕೆ.ಮಠ, ಸಿದ್ದು ಕೊಣ್ಣೂರು, ಹಣಮಂತ ಕೊಣ್ಣೂರು, ನಸೀರ್ ಬಾದಾಮಿ, ವರ್ಧಮಾನ ಯರಗುದರಿ, ಎಂ.ವೆಂಕಟೇಶ್ ಇದ್ದರು.

ಗ್ರಾಮೀಣ ಕ್ರೀಡಾ ಉತ್ಸವ ಮಾ.5ರಿಂದ
ಎಂಆರ್‌ಎನ್‌ ನಿರಾಣಿ ಫೌಂಡೇಶನ್ ವತಿಯಿಂದ ಮಾರ್ಚ್ 5ರಿಂದ 8ರವರೆಗೆ ಗ್ರಾಮೀಣ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಪುರುಷ ಹಾಗೂ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪ್ರೊ ಕಬಡ್ಡಿ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ರಾಜ್ಯಮಟ್ಟದ ಸಂಗ್ರಾಮ ಕಲ್ಲು ಎತ್ತುವ, ಗುಂಡು ಎತ್ತುವ, ಚೀಲ ಎತ್ತುವ ಹಾಗೂ ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳು ನಡೆಯಲಿವೆ ಎಂದು ಸಂಗಮೇಶ ನಿರಾಣಿ ತಿಳಿಸಿದರು.

‘ಕಬಡ್ಡಿ ಪಂದ್ಯಾವಳಿಯಲ್ಲಿ ಒಎನ್‌ಜಿಸಿ, ಭಾರತ್‌ ಪೆಟ್ರೋಲಿಯಂ, ಮಹಾರಾಷ್ಟ್ರ ಪೊಲೀಸ್ ಸೇರಿದಂತೆ ಖೇಲೊ ಇಂಡಿಯಾದಲ್ಲಿ ಆಡಿದ್ದ ರಾಷ್ಟ್ರೀಯ ತಂಡಗಳು ಪಾಲ್ಗೊಳ್ಳಲಿವೆ. ಸ್ಥಳೀಯವಾಗಿ ಪಾಲ್ಗೊಳ್ಳುವ 200 ತಂಡಗಳಲ್ಲಿ 25 ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಒಂದು ವರ್ಷ ತರಬೇತಿ ನೀಡಿ ಅಂತಿಮವಾಗಿ 12 ಜನರನ್ನೊಳಗೊಂಡ ನಿರಾಣಿ ಫೌಂಡೇಶನ್‌ ಕಬಡ್ಡಿ ತಂಡ ಕಟ್ಟಲಾಗುವುದು’ ಎಂದರು.

ಭರ್ಜರಿ ಬಹುಮಾನದ ಕೊಡುಗೆ..
ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪುರುಷರ ತಂಡಕ್ಕೆ ₹ 2 ಲಕ್ಷ, ದ್ವಿತೀಯ ಬಹುಮಾನ ₹1.50 ಲಕ್ಷ, ತೃತೀಯ ಹಾಗೂ ಚತುರ್ಥ ತಲಾ ₹1 ಲಕ್ಷ, ಮಹಿಳೆಯರ ತಂಡಕ್ಕೆ ಪ್ರಥಮ ಬಹುಮಾನ ₹1ಲಕ್ಷ, ದ್ವಿತೀಯ ಬಹುಮಾನ ₹75 ಸಾವಿರ, ತೃತೀಯ ಹಾಗೂ ಚತುರ್ಥ ₹50 ಸಾವಿರ ನಿಗದಿಗೊಳಿಸಲಾಗಿದೆ. ಸಂಗ್ರಾಮ ಕಲ್ಲು, ಚೀಲ ಹಾಗೂ ಗುಂಡು ಎತ್ತುವ ಸ್ಪರ್ಧೆಯಲ್ಲಿ ಮೊದಲ ಬಹುಮಾನ ತಲಾ ₹10 ಸಾವಿರ ಕೊಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT