ಶುಕ್ರವಾರ, ಮಾರ್ಚ್ 31, 2023
22 °C
ಹಣಕಾಸು ಸಾಕ್ಷರತೆ ಸಮಾವೇಶದಲ್ಲಿ ಕೇಂದ್ರ ಸಚಿವೆ ಅಭಿಮತ

ಆರ್ಥಿಕ ಸಾಕ್ಷರತೆಯಿಂದ ಕುಟುಂಬ ಸದೃಢ: ಸಾಧ್ವಿ ನಿರಂಜನ ಜ್ಯೋತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಹಿಳೆಯರನ್ನು ಆರ್ಥಿಕ ಸಾಕ್ಷರರನ್ನಾಗಿ ಮಾಡಿದರೆ ಆ ಕುಟುಂಬವೂ ಆರ್ಥಿಕವಾಗಿ ಸದೃಢವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರವು ‘ಜನ್‌ ಧನ್’ ಸೇರಿ ಹಲವು ಮಹಿಳಾ ಪರ ಕಾರ್ಯಕ್ರಮಗಳನ್ನು ರೂಪಿಸಿದೆ’ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ತಿಳಿಸಿದರು. 

ನ್ಯಾಷನಲ್ ಅಕಾಡೆಮಿ ಆಫ್ ರುಡ್‌ಸೆಟ್ ಸಹಯೋಗದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಗರದಲ್ಲಿ ಬುಧವಾರ ಹಮ್ಮಿಕೊಂಡ ಸಕ್ಷಮ್ ರಾಷ್ಟ್ರಮಟ್ಟದ ಹಣಕಾಸು ಸಾಕ್ಷರತೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ‘ಜನ್‌ ಧನ್‌’ದಂತಹ ಯೋಜನೆಗಳು ಸಹಕಾರಿಯಾದವು. ಹಿಂದೆ ಗ್ರಾಮೀಣ ಭಾಗದ ಜನರು ಬ್ಯಾಂಕ್‌ಗಳ ಮುಂದೆ ದಿನವಿಡೀ ಕಾಯುವ ಸ್ಥಿತಿ ಇತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಸ್ಥಿತಿ ಬದಲಾಗಿ, ಡಿಜಿಟಲೀಕರಣದ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಯಿತು’ ಎಂದು ಹೇಳಿದರು. 

‘ಹಣಕಾಸು ಸಾಕ್ಷರತೆ ಕೊರತೆಯಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆರ್ಥಿಕ ನಿರ್ಧಾರ ಕಷ್ಟಕರವಾಗಿತ್ತು. ಆದ್ದರಿಂದ ಎಲ್ಲ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಹಣಕಾಸು ಸಾಕ್ಷರತೆ ತರಬೇತಿ ನೀಡಲಾಗುತ್ತಿದೆ. ಇದರಿಂದ ಹಣಕಾಸು ಸೇವೆ, ಬ್ಯಾಂಕ್ ವ್ಯವಹಾರ, ವಿಮೆ, ಪಿಂಚಣಿ, ಸಾಲದ ಮೇಲಿನ ಬಡ್ಡಿ ಸೇರಿ ವಿವಿಧ ಹಣಕಾಸು ಸಂಬಂಧಿ ಗೊಂದಲ ನಿವಾರಣೆ ಆಗಲಿದೆ’ ಎಂದರು. 

ರಾಜ್ಯ ಕೌಶಲ ಅಭಿವೃದ್ದಿ ನಿಗಮದ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ‘ರಾಜ್ಯ ಸರ್ಕಾರ ಮಹಿಳಾ ಉದ್ಯಮಿಗಳ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಮಹಿಳೆಯರೂ ಹಲವು ಉದ್ಯೋಗಗಳಲ್ಲಿ ತೊಡಗಲು ಕೌಶಲ ತರಬೇತಿ ನೀಡಲಾಗುತ್ತಿದೆ’ ಎಂದರು.

ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ.ಖುರಾನ, ‘ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಬಗ್ಗೆ ಬ್ಯಾಂಕ್‌ಗಳು ಅರಿವು ಮೂಡಿಸುತ್ತಿವೆ. ಸೈಬರ್ ವಂಚನೆ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸುವ ಕೆಲಸವೂ ಆಗಬೇಕು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು