ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಟ್ಟಡ ದುರಸ್ತಿಗೆ ಆಗ್ರಹ

ಮರ ಬಿದ್ದು ಕಟ್ಟಡದ ಗೋಡೆ ಬಿರುಕು– ಪೋಷಕರ ಆತಂಕ
Last Updated 1 ಜೂನ್ 2018, 12:42 IST
ಅಕ್ಷರ ಗಾತ್ರ

ಬೀರೂರು: ಸಮೀಪದ ಬಳ್ಳಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲೆ ಮರ ಬಿದ್ದ ಪರಿಣಾಮ ಕೊಠಡಿ ಹಾನಿಗೊಳಗಾಗಿ ಮಕ್ಕಳ ಕಲಿಕೆಗೆ ಅಡ್ಡಿಯಾಗಿದ್ದು, ಕಟ್ಟಡ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಸುರಿದ ಮಳೆಗೆ ಶಾಲೆಯ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಅಳವಡಿಸಿದ್ದ ಮಂಗಳೂರು ಹೆಂಚು ಹಾನಿಗೊಳಗಾಗಿದ್ದು ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡು ಅಂದಿನಿಂದ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ನೆರವಾಗಿರುವ ಈ ಶಾಲೆ ಬಳ್ಳಿಗನೂರು ಭಾಗದ ಹಳೆಯ ಶಾಲೆಯಾಗಿದೆ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದು, ಮಕ್ಕಳ ಕಲಿಕೆಗೆ ಪೂರಕವಾದ ಕಟ್ಟಡ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳು ಎಲ್ಲೆಂದರಲ್ಲಿ ಕುಳಿತು ಪಾಠ ಕಲಿಯಬೇಕಾದ ವಾತಾವರಣ ಇದೆ.

ಕಟ್ಟಡದ ಗೋಡೆಗಳು ಶಿಥಿಲಗೊಂಡಿದ್ದು, ಮೇಲ್ಚಾವಣಿ ಸಹ ಹಳೆಯದಾಗಿದೆ. ಶಾಲೆಯ ಕಟ್ಟಡದ ಸ್ಥಿತಿಯ ಬಗ್ಗೆ ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಶಾಲಾಭಿವೃದ್ದಿ ಸಮಿತಿ ಸದಸ್ಯ ಯತೀಶ್.

ನಾಲ್ಕು ವರ್ಷಗಳಿಂದ ಶಾಲಾ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಲು ಹಲವು ಬಾರಿ ಮನವಿ ಮಾಡಿದರೂ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ ಎನ್ನುವುದು ಮಕ್ಕಳ ಪೋಷಕರ ಅಳಲು. ಏಳು ಕೊಠಡಿಗಳು ಇರುವ ಕಡೆ ಇದೀಗ ಐದು ಕೊಠಡಿಗಳು ಮಾತ್ರ ಬಳಕೆಯಲ್ಲಿ ಇದ್ದು, ಈ ಕೊಠಡಿಗಳೂ ಭಾಗಶಃ ಶಿಥಿಲಗೊಂಡಿವೆ. ಇನ್ನೆರಡು ಕೊಠಡಿಗಳು ಬಳಸಲು ಸಾಧ್ಯವಾಗದಂತೆ ಹಾನಿಗೊಳಗಾಗಿವೆ. ಸರಿಯಾದ ಕಟ್ಟಡ ವ್ಯವಸ್ಥೆ ಇಲ್ಲದಿರುವುದು ಮಕ್ಕಳ ಕಲಿಕೆಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ. ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದು ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಲಿ ಎನ್ನುವುದು ಶಿಕ್ಷಕರ ಆಗ್ರಹವಾಗಿದೆ.

‘ನಮ್ಮ ಭಾಗದ ಹಳೆಯ ಶಾಲೆಯ ಕಟ್ಟಡ ದುರಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಮರ್ಪಕ ಅನುದಾನ ಬಿಡುಗಡೆ ಮಾಡುವ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಹಾಗೂ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಮಳೆಗಾಲ ಆರಂಭವಾಗುತ್ತಿರುವುದರಿಂದ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಿ’ ಎನ್ನುತ್ತಾರೆ ಶಿವಮೂರ್ತಿ ಬಳ್ಳಿಗನೂರು.

ದುರಸ್ತಿಗೆ ಕ್ರಮ: ಬಿಇಒ

ಬೀರೂರು ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳ ದುರಸ್ತಿಗೆ ಕ್ರಮ ವಹಿಸಬೇಕಾದ ಮಾಹಿತಿಯನ್ನು ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ನೀಡಲಾಗಿದೆ. ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಮನ್ವಯ ಮತ್ತು ಸಹಕಾರದಿಂದ ಶೀಘ್ರವೇ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದು ಬೀರೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿ.ರಾಜಣ್ಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT