ಬುಧವಾರ, ಆಗಸ್ಟ್ 12, 2020
22 °C

ಮಯ್ಯ ಆತ್ಮಹತ್ಯೆ: 11 ಮಂದಿ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಮಾಜಿ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಸಾಲ ಪಡೆದವರ ಮಾನಸಿಕ ಕಿರುಕುಳದಿಂದಾಗಿಯೇ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ವಾಸುದೇವ ಮಯ್ಯ ಅವರ ಪುತ್ರಿ ರಶ್ಮಿ ನೀಡಿದ ದೂರು ಆಧರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

‘ಬ್ಯಾಂಕ್‌ನ ಈಗಿನ ಸಿಇಓ ಸಂತೋಷ ಕುಮಾರ್, ರವಿ ಐತಾಳ, ರಾಕೇಶ್, ಶ್ರೀಪಾದ ಹೆಗಡೆ ಮತ್ತು ಪ್ರಶಾಂತ್ ಎಂಬುವರ ಕಿರುಕುಳವೇ ತನ್ನ ತಂದೆಯ ಆತ್ಮಹತ್ಯೆಗೆ ಕಾರಣ’ ಎಂದೂ ದೂರಿನಲ್ಲಿ ರಶ್ಮಿ ಆರೋಪಿಸಿದ್ದಾರೆ.

‘ಬ್ಯಾಂಕಿನ ಮಂಡಳಿ ಸದಸ್ಯರ ಅನುಮತಿಯಂತೆ ಹಲವರಿಗೆ ಸಾಲ ನೀಡಲಾಗಿತ್ತು. ಆದರೆ, 2019ರಲ್ಲಿ ಆರ್‌ಬಿಐ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಸರಿಯಾಗಿ ಅಂಕಿ ಅಂಶ ನೀಡಲಿಲ್ಲ. ಆರ್‌ಬಿಐ ಪರಿಶೀಲನೆ ವೇಳೆ ನನ್ನ ತಂದೆ ಕಡೆಯಿಂದ ಬಲವಂತವಾಗಿ ದಾಖಲೆಗಳ ಮೇಲೆ ಸಹಿ ಪಡೆಯಲಾಗಿತ್ತು. ಬ್ಯಾಂಕಿನ ಮುಖ್ಯ ಕಚೇರಿ ನೆಟ್ಟಕಲ್ಲಪ್ಪ ವೃತ್ತದ ಬಳಿ ಇದ್ದರೂ ಅವ್ಯವಹಾರದ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ಸಂಶಯ ಉಂಟು ಮಾಡಿದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ತಂದೆಯವರಿಗೆ ಬ್ಯಾಂಕ್ ವಹಿವಾಟಿನ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದೆ ಇದ್ದುದರಿಂದ ಕಂಪ್ಯೂಟರ್ ಪಾಸ್‌ವರ್ಡ್ ಅನ್ನು ಸಹೋದ್ಯೋಗಿಗಳಿಗೆ ನೀಡಿದ್ದರು. ತಮ್ಮ ತಂದೆ ಮಾಡದ ತಪ್ಪಿಗೆ ಅವರನ್ನು ಹೊಣೆ ಮಾಡಲಾಗಿದೆ. ಹೀಗಾಗಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮರಣಪತ್ರ ಪರಿಗಣಿಸಿ ಕ್ರಮ ಕೈಗೊಳ್ಳಿ’ ಎಂದೂ ಆಗ್ರಹಿಸಿದ್ದಾರೆ. ಸುಬ್ರಮಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು