ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಲಿ ಪಾಷಾಣ ಸಿಂಪಡಣೆ: ಹಾಸ್ಟೆಲ್‌ ಸಿಬ್ಬಂದಿ ವಿರುದ್ಧ ಎಫ್‌ಐಆರ್‌

ಹಾಸ್ಟೆಲ್‌ನಲ್ಲಿದ್ದ 19 ವಿದ್ಯಾರ್ಥಿಗಳು ಅಸ್ವಸ್ಥ, ಮೂವರ ಸ್ಥಿತಿ ಗಂಭೀರ
Published : 19 ಆಗಸ್ಟ್ 2024, 16:53 IST
Last Updated : 19 ಆಗಸ್ಟ್ 2024, 16:53 IST
ಫಾಲೋ ಮಾಡಿ
Comments

ಬೆಂಗಳೂರು: ಇಲಿ ಪಾಷಾಣದಿಂದ ಉಸಿರಾಟದ ಸಮಸ್ಯೆ ಉಂಟಾಗಿ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಪ್ರಕರಣದ ಸಂಬಂಧ ಖಾಸಗಿ ನರ್ಸಿಂಗ್‌ ಕಾಲೇಜೊಂದರ ಹಾಸ್ಟೆಲ್‌ನ ಸಿಬ್ಬಂದಿ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇಲಿ ಪಾಷಾಣ ಸಿಂಪಡಿಸಿದ್ದ ಮಂಜೇಗೌಡ ಮತ್ತು ಹಾಸ್ಟೆಲ್ ವ್ಯವಸ್ಥಾಪಕ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪೈಕಿ ನೋಯಲ್ ಎಂಬುವವರ ಹೇಳಿಕೆ ಆಧರಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌) ಕಲಂ 286ರ ಪ್ರಕಾರ (ವಿಷಕಾರಿ ಪದಾರ್ಥಕ್ಕೆ ಸಂಬಂಧಪಡುವ ನಿರ್ಲಕ್ಷ್ಯ ವರ್ತನೆ) ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಮೂವರಿಗೆ ಐಸಿಯುನಲ್ಲಿ ಚಿಕಿತ್ಸೆ: ಜ್ಞಾನಭಾರತಿ ಅಮ್ಮ ಆಶ್ರಮದ ಸಮೀಪದ ಆದರ್ಶ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಇಲಿಗಳ ಕಾಟ ಹೆಚ್ಚಾಗಿತ್ತು. ನೆಲಮಹಡಿಯ ಜನರೇಟರ್‌ಗಳಿಗೆ ಇಲಿಗಳಿಂದ ತೊಂದರೆ ಆಗುತ್ತಿತ್ತು. ಅವುಗಳು ವೈರ್ ಕತ್ತರಿಸಿ ವಿದ್ಯುತ್ ಸಂಪರ್ಕಕ್ಕೆ ಅಡಚಣೆ ಉಂಟು ಮಾಡುತ್ತಿದ್ದವು. ಭಾನುವಾರ ರಾತ್ರಿ ಮಂಜೇಗೌಡ ಅವರು ಇಲಿ ಪಾಷಾಣ ಸಿಂಪಡಿಸಿದ್ದರು. ಈ ವೇಳೆ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿಗಳ ಪೈಕಿ, 19 ಮಂದಿಗೆ ಉಸಿರಾಟದ ಮೂಲಕ ವಿಷಕಾರಿ ವಸ್ತು ದೇಹ ಸೇರಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಸಮೀಪದ ಮೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಜಯಾನ್ ವರ್ಗಿಸ್, ದಿಲೇಶ್ ಹಾಗೂ ಜೊಮೋನ್ ಎಂಬ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ಮುಂದುವರೆದಿದೆ. 16 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ.

ಪ್ರಕರಣ ದಾಖಲಿಸಿಕೊಂಡು ಹಾಸ್ಟೆಲ್ ಸಿಬ್ಬಂದಿ ಹಾಗೂ ವಿಷಕಾರಿ ವಸ್ತು ಸಿಂಪಡಿಸಿದ ಮಂಜೇಗೌಡ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT