ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸುಳ್ಳುಗಾರ: ರಾಹುಲ್‌ ವಾಗ್ದಾಳಿ

Last Updated 24 ಫೆಬ್ರುವರಿ 2018, 20:25 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ‘ಪ್ರಧಾನಿ ನರೇಂದ್ರ ಮೋದಿ ಒಬ್ಬ ಸುಳ್ಳುಗಾರ. ಬರೀ ಸುಳ್ಳುಗಳನ್ನು ಹೇಳುತ್ತಾ ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.

‘ನುಡಿದಂತೆ ನಡೆ’ ಎಂದು ಬಸವಣ್ಣ ಹೇಳಿದ್ದರು. ಬಸವಣ್ಣನ ಬಗ್ಗೆ ಮಾತನಾಡುವ ಮೋದಿ, ಅವರ ಮಾತಿನಂತೆ ನಡೆದಿಲ್ಲ ಎಂದು ಕುಟುಕಿದರು.‌

ಲಿಂಗಾಯತ ಪ್ರಾಬಲ್ಯವಿರುವ ಮುಂಬೈ– ಕರ್ನಾಟಕದಲ್ಲಿ ಎರಡನೇ ಹಂತದ ಮೂರು ದಿನಗಳ ‘ಜನಾಶೀ
ರ್ವಾದ ಯಾತ್ರೆ’ಯನ್ನು ಶನಿವಾರ ಇಲ್ಲಿ ಆರಂಭಿಸಿ ಮಾತನಾಡಿದ ರಾಹುಲ್‌, ‘ನಾವು ಸುಳ್ಳು ಹೇಳುವುದಿಲ್ಲ. ಕೆಲಸ ಮಾಡಿ ತೋರಿಸಿದ್ದೇವೆ. ರಾಜ್ಯ ಸರ್ಕಾರ ಬಸವಣ್ಣನ ಮಾತಿನಂತೆ ನಡೆದಿದೆ’ ಎಂದು ಬಣ್ಣಿಸಿದರು.

ಬಸವಣ್ಣನವರ ಹೆಸರು ಹಾಗೂ ವಚನಗಳನ್ನು ಬಳಸಿ ಭಾಷಣದುದ್ದಕ್ಕೂ ಮೋದಿಯನ್ನು ಮಾತಿನಿಂದ ತಿವಿದ ರಾಹುಲ್‌, ಸೇರಿದ್ದ ಬೃಹತ್‌ ಜನಸ್ತೋಮ ವನ್ನು ತಮ್ಮತ್ತ ಆಕರ್ಷಿಸಿದರು.

‘ಇವನಾರವ... ಇವನಾರವ... ಇವ ನಮ್ಮವ ಇವ ನಮ್ಮವ...’ ಎಂದು ಬಸವಣ್ಣ ಸಾರಿದ್ದರು. ನಮ್ಮ ಪಕ್ಷದ್ದು ಅದೇ ತತ್ವ, ಅದೇ ಚಿಂತನೆ. ಎಲ್ಲರೂ ಒಂದೇ ಎಂಬ ಭಾವನೆ ನಮ್ಮದು. ನಾವೆಲ್ಲರೂ ಬಸವಣ್ಣನ ದಾರಿಯಲ್ಲೇ ನಡೆಯುತ್ತಿದ್ದೇವೆ’ ಎಂದರು.

ಕಳೆದ ಐದು ವರ್ಷದಲ್ಲಿ 358 ದಲಿತರ ಕೊಲೆಯಾಗಿದೆ. 9,058 ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದು, 801 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ. ಇದನ್ನು ಗೃಹ ಸಚಿವರೇ ಸದನದಲ್ಲಿ ವಿವರಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದರು.

ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಈ ಬಗ್ಗೆ ಮಾತನಾಡಬೇಕು. ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಯ ಕಿವಿ ಹಿಂಡಬೇಕು ಎಂದರು.

‘ಇಸ್ರೊ ರಾಕೆಟ್ ಹಾರಿಸಿದರೂ ನಾನೇ ಹಾರಿಸಿದ್ದು ಎನ್ನುವ ಮೋದಿ, ‌ಗಡಿಭಾಗದಲ್ಲಿ ಸೈನಿಕರು ಉಗ್ರರ ವಿರುದ್ಧ ದಾಳಿ ಮಾಡಿದಾಗಲೂ ತಮ್ಮದೇ ಸಾಧನೆ ಎಂದು ಕೊಚ್ಚಿಕೊಳ್ಳುತ್ತಾರೆ. ಸುಷ್ಮಾ ಸ್ವರಾಜ್, ನಿತಿನ್‌ ಗಡ್ಕರಿ, ರಾಜನಾಥ್ ಸಿಂಗ್‌ ಮತ್ತಿತರ ಸಚಿವರಿದ್ದರೂ ಎಲ್ಲವನ್ನೂ ತಾವೇ ಮಾಡಿದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗಳಿಗೂ ₹ 15 ಲಕ್ಷ ಜಮೆ ಮಾಡುತ್ತೇನೆ. ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂಬ ಭರವಸೆಗಳೇನಾದವು’ ಎಂದು ಕಾಂಗ್ರೆಸ್‌ ಅಧ್ಯಕ್ಷರು ಪ್ರಶ್ನಿಸಿದರು.

‘ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರನ ಆಸ್ತಿ ಬಗ್ಗೆ ಮೋದಿ ಮಾತನಾಡುತ್ತಿಲ್ಲ. ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದದ ಬಗ್ಗೆ ಕೇಳಿದರೂ ಮೌನ ವಹಿಸಿದ್ದಾರೆ’ ಎಂದು ಟೀಕಿಸಿದ ರಾಹುಲ್‌, ‘ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟ ಎಂದು ಮೋದಿ ಆರೋಪಿಸಿದ್ದಾರೆ. ಆದರೆ, ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರೇ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ಹಿಂದೆ ನಾಲ್ವರು ಮಂತ್ರಿಗಳೂ ಹಿಂಬಾಲಿಸಿ ಬಂದಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ 11,500 ಕೋಟಿ ವಂಚಿಸಿದ ನೀರವ್ ಮೋದಿ ಪ್ರಕರಣ ಬಹಿರಂಗಗೊಂಡ ಬಳಿಕ ಕ್ರಮ ಕೈಗೊಳ್ಳುತ್ತೇನೆ ಎಂದಷ್ಟೆ ಮೋದಿ ಹೇಳುತ್ತಾರೆ. ಕ್ರಮ ಕೈಗೊಳ್ಳುವ ಮೊದಲು ಬ್ಯಾಂಕ್‌ನಿಂದ ಅಷ್ಟು ದೊಡ್ಡ ಮೊತ್ತದ ಹಣ ಹೇಗೆ ವಂಚನೆಯಾಯಿತು ಎಂಬುವುದನ್ನು ಬಹಿರಂಗಪಡಿಸ
ಬೇಕು’ ಎಂದು ಆಗ್ರಹಿಸಿದರು.

ನಮಸ್ಕಾರ.. ಚೆನ್ನಾಗಿದ್ದೀರಾ...

’ನಮಸ್ಕಾರ... ಚೆನ್ನಾಗಿದ್ದೀರಾ...’ ಎಂದು ರಾಹುಲ್‌ ಮಾತು ಆರಂಭಿಸುತ್ತಿದ್ದಂತೆ ಜನ ಸಂಭ್ರಮಿಸಿದರು. ಭಾಷಣದುದ್ದಕ್ಕೂ ಬಸವಣ್ಣನನ್ನು ‘ಬಸವಜೀ... ಬಸವಜೀ’ ಎಂದು ಸಂಬೋಧಿಸಿದರು. ಚೀಟಿಯೊಂದರಲ್ಲಿ ಬರೆದುಕೊಂಡಿದ್ದ ಬಸವಣ್ಣನ ವಚನಗಳನ್ನು ತೊದಲುತ್ತ ಓದಿದಾಗಲೂ ಜನಸ್ತೋಮ ಕೇಕೆ ಹಾಕಿತು. ಆದರೆ, ‘ಇವನಾರವ ಇವನಾರವ ಇವ ನಮ್ಮವ ಇವನಮ್ಮವ’ ಎಂದು ರಾಹುಲ್‌ ಹೇಳಿದ್ದು ಮಾತ್ರ ಜನರಿಗೆ ಆರಂಭದಲ್ಲಿ ಅರ್ಥವಾಗಲಿಲ್ಲ!

‘ಕರ್ನಾಟಕಕ್ಕೆ ನಾನು ಇತ್ತೀಚೆಗಷ್ಟೇ ಆಗಾಗ ಬರಲಾರಂಭಿಸಿದ್ದೇನೆ. ಕಳೆದ ಬಾರಿ ಭೇಟಿ ಕೊಟ್ಟಾಗ ಬಸವ ಸಂಸತ್ತಿಗೆ (ಅನುಭವ ಮಂಟಪ) ಹೋಗಿದ್ದೆ. ಇಲ್ಲಿನ ವೈಶಿಷ್ಟ್ಯ ಕಂಡಿದ್ದೇನೆ.  ಬಸವಣ್ಣನ ಆದಿಯಾಗಿ ಅಕ್ಕ ಮಹಾದೇವಿ, ಶಿಶುನಾಳ ಷರೀಫ, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರು ಮೊದಲಾದವರು ಈ ನಾಡಿನ ಹಿರಿಮೆಯನ್ನು ಜಗತ್ತಿಗೆ ಸಾರಿದ್ದಾರೆ’ ಎಂದು ಬಣ್ಣಿಸಿದರು.

**

ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಹೇಳಿಕೊಂಡು ಹೋಗುತ್ತಾರೆ. ನಮ್ಮದು ಕಾಮ್ ಕೀ ಬಾತ್
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

**

ಬ್ಯಾಂಕಿಲ್ಲಿ ಹಣ ಇಟ್ಟರೆ ನೀರವ್, ಷೇರು ಪೇಟೆಯಲ್ಲಿ ತೊಡಗಿಸಿದರೆ ಲಲಿತ್, ಮನೆಯಲ್ಲಿಟ್ಟರೆ ನರೇಂದ್ರ– ಈ ಮೂರು ಮೋದಿಗಳಿಂದ ದೇಶ ಲೂಟಿಯಾಗಿದೆ
ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ

**

ನಿಮ್ಮ ಕುಮ್ಮಕ್ಕು ಇಲ್ಲದೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಲೂಟಿ ಸಾಧ್ಯವಿಲ್ಲ ಮೋದಿಯವರೇ. ಭ್ರಷ್ಟಾಚಾರದ ಫೆಸಿಲಿಟೇಟರ್ ನೀವು.
ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT