ಶುಕ್ರವಾರ, ಡಿಸೆಂಬರ್ 3, 2021
26 °C

ಪಡಿತರ ಧಾನ್ಯ ಕಳ್ಳಸಾಗಣೆ: ಏಳು ಜನರ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಡಿತರ ಚೀಟಿದಾರರಿಗೆ ವಿತರಿಸಲು ಪೂರೈಕೆಯಾಗಿದ್ದ ಆಹಾರ ಧಾನ್ಯಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಏಳು ಮಂದಿಯ ವಿರುದ್ಧ ನಗರದ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಿಸಲಾಗಿದೆ.

ಜರಗನಹಳ್ಳಿ ನಿವಾಸಿ ದೀಪಕ್‌ ಕುಮಾರ್‌, ಚಿಕ್ಕಕಲ್ಲಸಂದ್ರದ ಶ್ರೀನಿವಾಸ್, ನಾಯಂಡಹಳ್ಳಿಯ ನಯಾಝ್‌, ಲಾರಿಗಳ ಮಾಲೀಕರಾದ ಶಬ್ಬೀರ್‌ ಅಹಮ್ಮದ್, ಯತೀಶ್‌ ಕುಮಾರ್‌ ಎಂ., ಚಾಂದ್ ಪಾಷ ಮತ್ತು ಲಕ್ಷ್ಮಿನರಸಿಂಹಯ್ಯ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಮುಖ ಆರೋಪಿ ದೀಪಕ್‌ ಕುಮಾರ್‌ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಲಚೇನಹಳ್ಳಿ ಮೆಟ್ರೊ ರೈಲು ನಿಲ್ದಾಣದ ಸಮೀಪದ ದೊಡ್ಡಮನೆ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದಾಗ ದಾಳಿಮಾಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ರಾಜ್ಯ ಮಟ್ಟದ ಜಾಗೃತದಳದ ಮುಖ್ಯಸ್ಥ ಡಾ.ಕೆ. ರಾಮೇಶ್ವರಪ್ಪ, 350 ಕ್ವಿಂಟಲ್‌ ಪಡಿತರ ಧಾನ್ಯ ಮತ್ತು ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ರಾಮೇಶ್ವರಪ್ಪ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅಕ್ಕಿ, ರಾಗಿ ಮತ್ತು ಲಾರಿಗಳ ಸಮೇತ ದೀಪಕ್‌ ಕುಮಾರ್‌ ಎಂಬುವವರನ್ನೂ ಆಹಾರ ಇಲಾಖೆ ಅಧಿಕಾರಿಗಳೇ ಪೊಲೀಸರ ವಶಕ್ಕೆ ನೀಡಿದ್ದರು. ಶನಿವಾರ ಎಫ್‌ಐಆರ್‌ ದಾಖಲಿಸಿದ ಪೊಲೀಸರು, ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಪಡಿತರ ಚೀಟಿದಾರರಿಗೆ ವಿತರಿಸಬೇಕಿದ್ದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಮಂಡ್ಯಕ್ಕೆ ಕಳ್ಳಸಾಗಣೆ ಮಾಡುತ್ತಿರುವುದಾಗಿ ಪ್ರಮುಖ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು