ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗೆ ಸಂಬಂಧಿಸಿ ಸರ್ಕಾರ ಮತ್ತು ಬಿಜೆಪಿ ಮಧ್ಯೆ ವಾಕ್ಸಮರ ಜೋರಾಗಿದೆ.
ಬಿಬಿಎಂಪಿ ಕಚೇರಿಯ ಕೊಠಡಿಗೆ ಬೆಂಕಿ ಬಿದ್ದ ಬೆನ್ನಲ್ಲೇ ಮೈಕ್ರೋಬ್ಲಾಗಿಂಗ್ ತಾಣ ‘ಎಕ್ಸ್’ ನಲ್ಲಿ ಬರೆದುಕೊಂಡಿದ್ದ ಕಾಂಗ್ರೆಸ್, ಇದು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿತ್ತು. ಅಲ್ಲದೇ ಶೇ 40ರಷ್ಟು ಕಮೀಷನ್ ಆರೋಪವನ್ನು ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ಬೆಂಕಿ ಬಿದ್ದಿದ್ದು, ಇದರ ಹಿಂದಿರುವ ಬಿಜೆಪಿಯ ದುಷ್ಕರ್ಮಿಗಳನ್ನು ಹಡೆಮುರಿ ಕಟ್ಟುವುದು ನಿಶ್ಚಿತ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿ ಬಿಡುವ ಹುನ್ನಾರ ನಡೆಸಿದೆ ಎಂದು ದೂರಿತ್ತು. ಜತೆಗೆ, ಈ ಟ್ವೀಟ್ ಅನ್ನು ಕೆಲವೇ ಕ್ಷಣಗಳಲ್ಲಿ ಅಳಿಸಿ ಹಾಕಿತ್ತು.
ಇದೇ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ‘ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಆರೋಪ ಮಾಡಿ ಓಡಿ ಹೋಗುವುದು ರೂಢಿಯೋ ಹಾಗೆ ಅವರ ಟ್ವಿಟರ್ ಹ್ಯಾಂಡಲ್ ಸಹ ಟ್ವೀಟ್ ಮಾಡಿ ಡಿಲೀಟ್ ಮಾಡಿದೆ. ಲಂಗು ಲಗಾಮು ಇಲ್ಲದ ಅಯೋಗ್ಯರು ಬಾಯಿಗೆ ಬಂದದ್ದು ಬರೆಯುವುದು ಅದರ ಸತ್ಯತೆಯ ಬಗ್ಗೆ ನಾವು ಬರೆದಾಗ ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗುತ್ತಾರೆ’ ಎಂದು ಟೀಕಿಸಿದ್ದಾರೆ.
‘ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಮಹಾನುಭಾವ ಒಬ್ಬರಿದ್ದರಲ್ಲವೇ? ಎಲ್ಲಿ ಮಾಯವಾಗಿದ್ದಾರೆ’ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿರುವ ಕಟ್ಟಡದಲ್ಲಿ ಶುಕ್ರವಾರ ಸಂಜೆ ಬೆಂಕಿ ಅವಘಡ ಸಂಭವಿಸಿತ್ತು. ಕಟ್ಟಡದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ಇಡೀ ಕಟ್ಟಡ ಆವರಿಸಿತ್ತು. ಕಚೇರಿ ಕೆಲಸದಲ್ಲಿದ್ದ 8 ನೌಕರರನ್ನು ಹೊರಗೆ ಕರೆತಂದು ರಕ್ಷಿಸಲಾಗಿತ್ತು. ಅವರಿಗೂ ಸಣ್ಣ–ಪುಟ್ಟ ಗಾಯಗಳಾಗಿದ್ದು, ಸೇಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಓದಿ... ಬಿಬಿಎಂಪಿ ಅಗ್ನಿ ದುರಂತ: ಎರಡು ಪ್ರತ್ಯೇಕ ತನಿಖೆಗೆ ಸಿ.ಎಂ ಸೂಚನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.