ಪರಿಹಾರದ ನಿರೀಕ್ಷೆಯಲ್ಲಿ ಐದು ಕುಟುಂಬಗಳು

7
ಬಾರ್‌ ಅಗ್ನಿ ದುರಂತದಲ್ಲಿ ಮೃತಪಟ್ಟ ಐವರು ನೌಕರರು l ₹ 5 ಲಕ್ಷ ಪರಿಹಾರ ಘೋಷಿಸಿದ್ದ ಸರ್ಕಾರ

ಪರಿಹಾರದ ನಿರೀಕ್ಷೆಯಲ್ಲಿ ಐದು ಕುಟುಂಬಗಳು

Published:
Updated:
ರಂಗಸ್ವಾಮಿ

ಬೆಂಗಳೂರು: ‘ಅಣ್ಣನನ್ನು ಕಳೆದುಕೊಂಡು ಕುಟುಂಬ ಬೀದಿಪಾಲಾಗಿದೆ. ಆತ ಸತ್ತಾಗ ₹ 5 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದ್ದ ಸರ್ಕಾರ, ಈಗ ಬೀದಿನಾಯಿಗಳಂತೆ ಅಲೆದಾಡಿಸುತ್ತಿದೆ. ‘ನಿಮ್ಮಣ್ಣ ಬಾರ್‌ನಲ್ಲಿ ಸತ್ತಿದ್ದಲ್ವ. ಹೋಗಿ ಬಾರ್ ಲೈಸನ್ಸ್‌ ನಂಬರ್ ತೆಗೆದುಕೊಂಡು ಬನ್ನಿ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಜನತಾದರ್ಶನದಲ್ಲೂ ನಮಗೆ ಸಿಕ್ಕಿರೋದು ಭರವಸೆ ಮಾತ್ರ...’

ಕಲಾಸಿಪಾಳ್ಯದ ‘ಕೈಲಾಶ್ ಬಾರ್ ಅಂಡ್ ರೆಸ್ಟೋರಂಟ್’ ಅಗ್ನಿ ದುರಂತದಲ್ಲಿ ಮೃತಪಟ್ಟ ಮಹೇಶ್‌ನ ತಮ್ಮ ಗಣೇಶ್ ಅವರ ನೋವಿನ ನುಡಿಗಳಿವು. ಜ.8ರ ನಸುಕಿನಲ್ಲಿ ಸಂಭವಿಸಿದ್ದ ಆ ದುರಂತದಲ್ಲಿ ಐದು ಮಂದಿ ಸಜೀವ ದಹನವಾಗಿದ್ದರು. ಆಗ ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದರು. ಆದರೆ, ಈವರೆಗೂ ಅದು ಕುಟುಂಬದ ಕೈಸೇರಿಲ್ಲ. ಆ ಹಣಕ್ಕಾಗಿ ಐದೂವರೆ ತಿಂಗಳಿನಿಂದ ಅವರೆಲ್ಲ ಕಚೇರಿಗಳನ್ನು ಸುತ್ತುತ್ತಲೇ ಇದ್ದಾರೆ.

ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡು ತಾವು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರ ಕೇಳಿಕೊಂಡು ಹೋದಾಗ, ಅಧಿಕಾರಿಗಳು ತಮ್ಮನ್ನು ನಡೆಸಿಕೊಂಡ ರೀತಿಯನ್ನು ಮೃತರ ಕುಟುಂಬ ಸದಸ್ಯರು ‘ಪ್ರಜಾವಾಣಿ’ಗೆ ವಿವರಿಸಿದ್ದಾರೆ.

‘ಮರಣೋತ್ತರ ಪರೀಕ್ಷೆ ನಡೆಯುವಾಗ ನಾವೆಲ್ಲ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದೆವು. ಬಾರ್ ಮಾಲೀಕನನ್ನು ಬಂಧಿಸುವವರೆಗೂ ಶವಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದೆವು. ಆಗ ಸ್ಥಳಕ್ಕೆ ಬಂದಿದ್ದ ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ಜಮೀರ್ ಅಹಮದ್, ಮೇಯರ್ ಸಂಪತ್‌ರಾಜ್ ಅವರು ಪರಿಹಾರದ ಆಸೆ ತೋರಿಸಿ ನಮ್ಮ ತಲೆ ಕೆಡಿಸಿದರು. ಆ ಕ್ಷಣಕ್ಕೆ ನಮ್ಮನ್ನು ಅಲ್ಲಿಂದ ಖಾಲಿ ಮಾಡಿಸಲು ಅವರೆಲ್ಲ ನಾಟಕದ ಮಾತುಗಳನ್ನಾಡಿದ್ದರು ಎಂದು ಈಗ ಎನಿಸುತ್ತಿದೆ’ ಎಂದು ಗಣೇಶ್ ದುಃಖತಪ್ತರಾದರು.

‘ಪರಿಹಾರ ಕೇಳಿಕೊಂಡು ವಿಧಾನಸೌಧಕ್ಕೆ ಹೋದರೆ, ಪೊಲೀಸರು ನಮ್ಮನ್ನು ಒಳಗೂ ಬಿಡಲಿಲ್ಲ. ‘ಅವರನ್ನು ಅಲ್ಲೇ ಮಾತನಾಡಿಸಿ ಕಳುಹಿಸಿ’ ಎಂದು ವಿಧಾನಸೌಧದೊಳಗಿನಿಂದ ಆ ಪೊಲೀಸರಿಗೆ ಆದೇಶ ಬಂದಿತ್ತಂತೆ. ಕೊನೆಗೆ ಬಿಬಿಎಂಪಿ ಕಚೇರಿಗೆ ಹೋಗಿ ವಿಚಾರಿಸಿದೆವು. ಅಲ್ಲಿನ ಒಬ್ಬ ಅಧಿಕಾರಿ, ‘ನಿಮ್ಮದು ಬಾರ್ ಕೇಸ್ ತಾನೇ. ಹೋಗಿ ಲೈಸನ್ಸ್ ನಂಬರ್ ತೆಗೆದುಕೊಂಡು ಬನ್ನಿ. ಇಲ್ಲದಿದ್ದರೆ, ಕೆಲಸ ಆಗುವುದಿಲ್ಲ’ ಎಂದು ಹೇಳಿದ. ನಾವು ಬಾರ್ ಮಾಲೀಕನ ಬಳಿ ಹೋಗಿ ಲೈಸನ್ಸ್ ನಂಬರ್ ಕೇಳಿಕೊಂಡು ಬರಲು ಸಾಧ್ಯವೇ ನೀವೇ ಹೇಳಿ’ ಎಂದು ಬೇಸರದಿಂದ ಪ್ರಶ್ನಿಸಿದರು.

ಮಗಳದ್ದೇ ಚಿಂತೆ: ‘ಮಗಳನ್ನು ಒಳ್ಳೆ ಮನೆತನಕ್ಕೆ ಕೊಟ್ಟು ಮದುವೆ ಮಾಡಬೇಕು ಎಂಬುದು ಪತಿಯ ಆಸೆಯಾಗಿತ್ತು. ಹೀಗಾಗಿಯೇ ಬೆಳಿಗ್ಗೆ ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡಿ, ಮಧ್ಯಾಹ್ನದ ನಂತರ ಆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರಿಲ್ಲದೆ ಜೀವನ ನಡೆಯುತ್ತಿಲ್ಲ. ನಮ್ಮ ಕಷ್ಟ ನೋಡಲಾಗದೆ, ಮಗ ಧನುಷ್‌ನನ್ನು ಸಂಬಂಧಿಕರು ಕರೆದುಕೊಂಡು ಹೋಗಿ ಓದಿಸುತ್ತಿದ್ದಾರೆ’ ಎಂದು ಮೃತ ಎಚ್‌.ಎಸ್.ಮಂಜುನಾಥ್ ಅವರ ಪತ್ನಿ ಲೀಲಾವತಿ ಅಳಲು ತೋಡಿಕೊಂಡರು.

‘ಎಷ್ಟೇ ಕಷ್ಟ ಇದ್ದರೂ ಸ್ವಾಭಿಮಾನದಿಂದಲೇ ಬದುಕು ದೂಡಿಕೊಂಡು ಬಂದಿದ್ದ ನಾವು, ಈಗ ಸಹಾಯ ಕೇಳಿಕೊಂಡು ಎಲ್ಲರ ಮನೆ ಬಾಗಿಲಿಗೆ ಹೋಗಿ ನಿಲ್ಲುವಂತಾಗಿದೆ. ಸರ್ಕಾರ ಘೋಷಿಸಿದಂತೆ ₹ 5 ಲಕ್ಷ ಪರಿಹಾರ ಕೊಟ್ಟರೆ, ಆ ಹಣದಲ್ಲೇ ಮಗಳ ಮದುವೆ ಮಾಡಬಹುದೆಂದು ಕಾಯುತ್ತಿದ್ದೇನೆ’ ಎಂದರು.

‘ಜನತಾದರ್ಶನಕ್ಕೆ ಹೋದಾಗ ಮುಖ್ಯಮಂತ್ರಿಗಳು ಸಿಗಲಿಲ್ಲ. ನಾರಾಯಣ್ ಎಂಬುವರು ಮನವಿ ಸ್ವೀಕರಿಸಿದರು. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ಹೇಳಿ ಕಳುಹಿಸಿದರು. ಅದು ಅವರನ್ನು ತಲುಪಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಐದು ಬಡಕುಟುಂಬಗಳು ಆ ಪರಿಹಾರವನ್ನೇ ಎದುರು ನೋಡುತ್ತಿವೆ ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದು’ ಎಂದು ರಂಗಸ್ವಾಮಿ, ಜೈಪ್ರಸಾದ್ (ಮೃತರು) ಅವರ ಸಂಬಂಧಿ ಕೆ.ಟಿ.ರಾಮಚಂದ್ರ ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೆ.ಜೆ.ಜಾರ್ಜ್ ಅವರಿಗೆ ಕರೆ ಮಾಡಿದಾಗ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಸಚಿವ ಜಮೀರ್ ಅಹಮದ್, ‘ತಕ್ಷಣ ಫೈಲ್ ತರಿಸಿಕೊಂಡು ಪರಿಶೀಲಿಸುತ್ತೇನೆ. ಹಣ ಬಿಡುಗಡೆ ವಿಳಂಬವಾಗಿರುವುದನ್ನು ಮುಖ್ಯಮಂತ್ರಿ ಗಮನಕ್ಕೂ ತರುತ್ತೇನೆ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !