ಬೆಂಗಳೂರು: ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಅವಘಡದಿಂದ ಗಾಯಗೊಂಡಿರುವ ಒಂಬತ್ತು ಮಂದಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್, ‘ಒಂಬತ್ತು ಜನಕ್ಕೂ ಪರಿಹಾರ ನೀಡುವ ಜೊತೆಗೆ ಅವರು ಶೇ 10ರಷ್ಟು ಚೇತರಿಸಿಕೊಳ್ಳುವವರೆಗೂ ವಿಶೇಷ ರಜೆಯನ್ನು ನೀಡಬೇಕು. ಎಲ್ಲರಿಗೂ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಪಾಲಿಕೆ ವತಿಯಿಂದಲೇ ಭರಿಸಬೇಕು' ಎಂದು ಮನವಿ ಮಾಡಿಕೊಂಡಿದ್ದಾರೆ.
ಮುಖ್ಯ ಎಂಜಿನಿಯರ್ ಶಿವಕುಮಾರ್, ಕಾರ್ಯಪಾಲಕ ಎಂಜಿನಿಯರ್ ವಿಜಯಮಾಲ, ಆಪರೇಟರ್ ಜ್ಯೋತಿ ಅವರಿಗೆ ಮಂಗಳವಾರ ಕೈಗಳಿಗೆ ಫ್ಯಾಸಿಯೊಟಮಿ (ಚರ್ಮ ಕಸಿ) ಪ್ರಕ್ರಿಯೆ ನಡೆಸಲಾಗಿತ್ತು. ಕಾರ್ಯಪಾಲಕ ಎಂಜಿನಿಯರ್ ಕಿರಣ್ ಅವರಿಗೆ ಮತ್ತೆ ಡಯಾಲಿಸಿಸ್ ನಡೆಸಲಾಗಿದೆ. ಅತಿಹೆಚ್ಚು ಗಂಭೀರವಾಗಿದ್ದ ಶಿವಕುಮಾರ್ ಅವರಿಗೆ ಉಸಿರಾಟದ ಪ್ರಕ್ರಿಯೆ ಸುಧಾರಿಸಲು ಸ್ಪೈರೊಮೆಟ್ರಿ ನಡೆಸಲಾಯಿತು. ಶಿವಕುಮಾರ್ ಹಾಗೂ ಜ್ಯೋತಿ ಅವರ ಸ್ಥಿತಿ ಇನ್ನೂ ಗಂಭೀರವಾಗಿದ್ದು ತೀವ್ರ ನಿಗಾ ವಹಿಸಲಾಗಿದೆ. ಉಳಿದ ಏಳು ಜನರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಪ್ರಕಟಣೆ ತಿಳಿಸಿದೆ.
ಪ್ರಯೋಗಾಲಯಕ್ಕೆ ವ್ಯವಸ್ಥೆ: ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಸ್ಥಳಾವಕಾಶ ಕಡಿಮೆಯಿದ್ದು, ಸಿಬ್ಬಂದಿ ಕಚೇರಿಗೆ ಪ್ರತ್ಯೇಕ ಕೊಠಡಿ ನೀಡಬೇಕು ಎಂದು 2022ರ ಆಗಸ್ಟ್ 16ರಂದು ಅಂದಿನ ಅಧೀಕ್ಷಕ ಎಂಜಿನಿಯರ್ ಬಿ.ಜಿ. ರಾಘವೇಂದ್ರ ಪ್ರಸಾದ್ ಟಿಪ್ಪಣಿ ಬರೆದು ಕಳುಹಿಸಿದ್ದರು. ಆದರೆ, ಅದು ಅಂದಿನಿಂದ ಪ್ರಧಾನ ಎಂಜಿನಿಯರ್ ಕಚೇರಿಯಲ್ಲಿತ್ತು.
ಇದೀಗ, ಪ್ರಯೋಗಾಲಯಕ್ಕೆ ಸುರಕ್ಷಿತ ಕ್ರಮಗಳನ್ನು ಒದಗಿಸುವ ಬಗ್ಗೆ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಮುಂದಾಗಿದ್ದಾರೆ.
‘ಪ್ರಯೋಗಾಲಯಕ್ಕೆ ಯಾವ ರೀತಿ ವ್ಯವಸ್ಥೆ ಕಲ್ಪಿಸಬೇಕು ಎಂಬುದನ್ನು ಇಂತಹ ಪ್ರಯೋಗಾಲಯಗಳನ್ನು ಹೊಂದಿರುವ ಲೋಕೋಪಯೋಗಿ ಇಲಾಖೆ, ಬಿಎಂಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ರಾಸ್ತಾ ಸೆಂಟರ್ ಫಾರ್ ರೋಡ್ ಟೆಕ್ನಾಲಜಿ ಅವರಿಂದ ತಾಂತ್ರಿಕ ಸಲಹೆಯನ್ನು ಪಡೆಯಲು ನಿರ್ಧರಿಸಲಾಗಿದೆ’ ಎಂದು ಪ್ರಹ್ಲಾದ್ ತಿಳಿಸಿದರು.
‘ಪ್ರಯೋಗಾಲಯದಲ್ಲಿ ಬಿಟುಮಿನ್ ಪರೀಕ್ಷಿಸಲು ಬೆಂಜೀನ್ ಬಳಸುವುದು ಸಹಜ. ಆದರೆ ಅಂದು ರಾಸಾಯನಿಕ ಸೋರಿಕೆಯಾಗಿದ್ದರಿಂದ ಬಿಸಿಗಾಳಿ ಹೆಚ್ಚಾಗಿ ಬೆಂಕಿ ಅವಘಡ ಸಂಭವಿಸಿದೆ’ ಎಂದು ಪ್ರಾಥಮಿಕ ತನಿಖೆ ನಡೆಸಿದ ಪ್ರಹ್ಲಾದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.