ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಮೊದಲ ಪ್ರಯೋಗ: ಕಂಟೈನರ್‌ನಲ್ಲಿ ಐಸಿಯು!

ರಿನಾಕ್ಸ್‌ ಕಂಪನಿಯಿಂದ ಅಭಿವೃದ್ಧಿ
Last Updated 18 ಜುಲೈ 2020, 10:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಆಗದಂತೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುವ ಬೆನ್ನಲ್ಲಿಯೇ, ಖಾಸಗಿ ಕಂಪನಿಯೊಂದು ಎಲ್ಲಿಗೆ ಬೇಕಾದರೂ ಕೊಂಡೊಯ್ದು ಬಳಸಬಹುದಾದ ‘ಮಾಡ್ಯೂಲರ್ ಐಸಿಯು‘ (ಮೊಬೈಲ್ ಐಸಿಯು) ಅಭಿವೃದ್ಧಿಪಡಿಸಿದೆ.

ಸಾಮಾನ್ಯವಾಗಿ ಹಡಗುಗಳಲ್ಲಿ ಸರಕು ಸಾಗಣೆಗೆ ಬಳಸಲಾಗುವ ಬೃಹತ್ ಗಾತ್ರದ ಕಂಟೈನರುಗಳಲ್ಲಿ ಈ ಐಸಿಯುಗಳನ್ನು ಅಭಿವೃದ್ಧಿಪಡಿಸಿದ್ದು, ನಗರದ ಕೋವಿಡ್ ಆರೈಕೆ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಅವುಗಳನ್ನು ಪರಿಶೀಲಿಸಿದರು.

ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಂಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ರಿನ್ಯಾಕ್ ಎಂಬ ಕಂಪನಿ ಈ ಐಸಿಯು ಅಭಿವೃದ್ಧಿಪಡಿಸಿದೆ. ಈ ಬಗ್ಗೆ ಕಂಪನಿಯ ತಜ್ಞರಿಂದ ಉಪ ಮುಖ್ಯಮಂತ್ರಿ ಮಾಹಿತಿ ಪಡೆದರು.

‘ಕಂಟೈನರುಗಳಲ್ಲಿ ಐಸಿಯು ಮಾಡಬಹುದು ಎಂಬ ಆಲೋಚನೆಯೇ ವಿನೂತನವಾಗಿದೆ. ದೇಶದಲ್ಲೇ ಮೊತ್ತಮೊದಲ ಬಾರಿಗೆ ಇಂಥ ತುರ್ತು ಚಿಕಿತ್ಸಾ ಘಟಕಗಳನ್ನು ಸಿದ್ಧಪಡಿಸಲಾಗಿದೆ. ನಮ್ಮ ಸಂಶೋಧಕರು, ತಜ್ಞರ ಸೃಜನಶೀಲತೆಗೆ ಇದು ಉತ್ತಮ ಉದಾಹರಣೆ. ಪ್ರಸಕ್ತ ಕಾಲದ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಳಸಲಾಗಿರುವ ಎಲ್ಲ ಉಪಕರಣಗಳು ಉತ್ತಮವಾಗಿವೆ’ ಎಂದು ಉಪ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಸಿಜೆಗೆ 10 ಕಂಟೈನರ್:
‘ಪ್ರಾಯೋಗಿಕವಾಗಿ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ಹತ್ತು ಕಂಟೈನರುಗಳನ್ನು ಮೊದಲು ಒದಗಿಸಲಾಗುವುದು. ಅಲ್ಲಿನ ವೈದ್ಯರೇ ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವರು. ಪ್ರತಿ ಕಂಟೈನರ್‌ನಲ್ಲಿ 5 ಹಾಸಿಗೆಗಳು ಇರುತ್ತವೆ. ರಿನ್ಯಾಕ್ ಕಂಪನಿ ತಮ್ಮದೇ ವೆಚ್ಚದಲ್ಲಿ ಎಕ್ಸ್’ಕ್ಲೂಸೀವ್ ಆಗಿ ನಮಗಾಗಿಯೇ ಇವುಗಳನ್ನು ತಯಾರಿಸಿ ಕೊಟ್ಟಿದೆ’ ಎಂದರು.

‘ಕೋವಿಡ್ ನಂತರವೂ ಇವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಕೇವಲ 10ರಿಂದ 15 ದಿನಗಳಲ್ಲಿ ಇಷ್ಟು ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ’ ಎಂದರು

ಇದರಲ್ಲಿ ಏನೇನಿರುತ್ತದೆ: ಆಮ್ಲಜನಕ ವ್ಯವಸ್ಥೆ, ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಕ್ಯಾಮೆರಾ ಕೂಡ ಇದ್ದು, ಆನ್‌ಲೈನ್ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಪರಿಕರಗಳನ್ನು ಅಳವಡಿಸಲಾಗಿದೆ. ಪ್ರತಿ ಕಂಟೈನರ್’ಗೆ 5 ಬೆಡ್ ಇದ್ದು, ಅದಕ್ಕೆ ಇನ್ನೊಂದು ಕಂಟೈನರ್ ಸೇರಿದರೆ 10 ಬೆಡ್’ಗಳಾಗುತ್ತವೆ. ಆಗ ಅದನ್ನು ಪ್ರತ್ಯೇಕ ನರ್ಸಿಂಗ್ ಹಾಗೂ ಮಾನಿಟರಿಂಗ್ ಸ್ಟೇಷನ್ ಎಂದು ಪರಿಗಣಿಸಿ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ. ಅದು ಪ್ರತ್ಯೇಕವಾಗಿರುತ್ತದೆ. ಎಲ್ಲಿಗೆ ಬೇಕಾದರೂ ಈ ಐಸಿಯುಗಳನ್ನು ಸಾಗಿಸಬಹುದು. ಆಯಾ ಆಸ್ಪತ್ರೆಗಳ ವೈದ್ಯರೇ ಇವುಗಳಲ್ಲಿ ದಾಖಲಾಗಿರುವ ರೋಗಿಗಳಿಗೂ ಚಿಕಿತ್ಸೆ ನೀಡಬಹುದು ಎಂದು ರಿನ್ಯಾಕ್ ಕಂಪನಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT