ಮದ್ಯ ತಯಾರಿಕಾ ಕಂಪನಿಗಳನ್ನು ಏಕೆ ಮುಚ್ಚಿಸಿಲ್ಲ: ಫ್ಲೆಕ್ಸ್‌ ಘಟಕಗಳ ಮಾಲೀಕರು

7

ಮದ್ಯ ತಯಾರಿಕಾ ಕಂಪನಿಗಳನ್ನು ಏಕೆ ಮುಚ್ಚಿಸಿಲ್ಲ: ಫ್ಲೆಕ್ಸ್‌ ಘಟಕಗಳ ಮಾಲೀಕರು

Published:
Updated:

ಬೆಂಗಳೂರು: ‘ಜಾಹೀರಾತುಗಳಿಂದ ನಗರದ ಸೌಂದರ್ಯಕ್ಕೆ ಹಾನಿ ಉಂಟಾಗುತ್ತದೆ ಎಂಬ ಕಾರಣಕ್ಕೆ ಫ್ಲೆಕ್ಸ್‌ ಮುದ್ರಣ ಘಟಕಗಳಿಗೆ ಬಿಬಿಎಂಪಿ ಬೀಗ ಹಾಕಿಸಿದೆ. ಅದೇ ರೀತಿ ಧೂಮಪಾನದಿಂದ ಹಾಗೂ ಮದ್ಯಪಾನದಿಂದ ಕೆಡುಕಾಗುತ್ತದೆ ಎಂದು ಗೊತ್ತಿದ್ದರೂ ಸರ್ಕಾರ ಸಿಗರೇಟು ಕಂಪನಿಗಳನ್ನು, ಮದ್ಯ ತಯಾರಿಸುವ ಕಂಪನಿಗಳನ್ನು ಏಕೆ ಮುಚ್ಚಿಸಿಲ್ಲ?’

ಫ್ಲೆಕ್ಸ್‌ ಮುದ್ರಣ ಘಟಕಗಳ ಮಾಲೀಕರು ಬಿಬಿಎಂಪಿ ಅಧಿಕಾರಿಗಳ ಮುಂದಿಟ್ಟ ಪ್ರಶ್ನೆ ಇದು.

ನಗರದಲ್ಲಿ ಫ್ಲೆಕ್ಸ್‌ ಮುದ್ರಣ ಘಟಕಗಳನ್ನು ಏಕಾಏಕಿ ಮುಚ್ಚಿಸಿದ್ದನ್ನು ವಿರೋಧಿಸಿ ಅವರು ಪಾಲಿಕೆ ಕೇಂದ್ರ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಈ ಉದ್ಯಮವನ್ನು ನೆಚ್ಚಿಕೊಂಡಿದ್ದಾರೆ. ಮುರು ದಿನಗಳಿಂದ ಈ ಘಟಕಗಳು ಕಾರ್ಯನಿರ್ವ ಹಿಸುತ್ತಿಲ್ಲ. ಈ ಕಾರ್ಮಿಕರು ಜೀವನ ನಡೆಸುವುದಾದರೂ ಹೇಗೆ’ ಎಂದು ಡಿಜಿಟಲ್‌ ಪ್ರಿಂಟರ್ಸ್‌ ಅಂಡ್ ಫ್ಲೆಕ್ಸ್‌ ಪ್ರಿಂಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಎನ್‌.ಕೃಷ್ಣಪ್ಪ ಪ್ರಶ್ನಿಸಿದರು.

‘ಇತ್ತೀಚೆಗೆ ಯುವ ಉದ್ಯಮಿಯೊಬ್ಬರು ₹ 15 ಲಕ್ಷ ಸಾಲ ಮಾಡಿ ಹೊಸತಾಗಿ ಘಟಕ ಆರಂಭಿಸಿದ್ದರು. ಅದಕ್ಕೂ ಅಧಿಕಾರಿಗಳು ಬೀಗ ಹಾಕಿದ್ದಾರೆ. ಅವರು ಆತ್ಮಹತ್ಯೆಗೆ ಮುಂದಾಗಿದ್ದರು’ ಎಂದರು.

‘ನಗರದ ಎಲ್ಲ ಅಂಗಡಿ ಮಳಿಗೆಗಳ ನಾಮಫಲಕಗಳನ್ನೂ ಫ್ಲೆಕ್ಸ್‌ನಲ್ಲೇ ಮುದ್ರಿಸಲಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳ ಕುರಿತು ಬಹುವರ್ಣದ ಮಾಹಿತಿ ಫಲಕಗಳನ್ನೂ ಇದರಲ್ಲೇ ಮುದ್ರಿಸುವುದು. ಇವುಗಳನ್ನೂ ನಿಷೇಧಿಸುತ್ತೀರಾ’ ಎಂದು ಅವರು ಪ್ರಶ್ನಿಸಿದರು.

‘ನಮ್ಮ ಘಟಕಗಳಲ್ಲಿ ಫ್ಲೆಕ್ಸ್‌ಗಳನ್ನು ಮಾತ್ರ ಮುದ್ರಿಸುತ್ತಿಲ್ಲ. ಬೇರೆ ಮುದ್ರಣವನ್ನೂ ಮಾಡುತ್ತೇವೆ. ಅದನ್ನು ಮುಂದುವರಿಸುವುದಕ್ಕಾದರೂ ಅವಕಾಶ ಕಲ್ಪಿಸಬೇಕು’ ಎಂದರು.

‘ಫ್ಲೆಕ್ಸ್‌ ಮುದ್ರಣ ಯಂತ್ರಕ್ಕೆ ₹ 20 ಲಕ್ಷ ಬಂಡವಾಳ ಹೂಡಿರುತ್ತೇವೆ. ಅದರ ಸಣ್ಣ ಬಿಡಿಭಾಗ ಕೆಟ್ಟರೂ, ದುರಸ್ತಿಗೆ ಲಕ್ಷಗಟ್ಟಲೆ ಖರ್ಚಾಗುತ್ತದೆ. ಇದನ್ನು ಅಧಿಕಾರಿಗಳು ಭರಿಸುತ್ತಾರೆಯೇ’ ಎಂದು ಅಸೋಸಿಯೇಷನ್‌ ಸದಸ್ಯ ಜಗದೀಶ್‌ ಪ್ರಶ್ನಿಸಿದರು.

‘ಫ್ಲೆಕ್ಸ್‌ಗಳನ್ನು ಪುನರ್ಬಳಕೆ ಮಾಡಲು ಅವಕಾಶವಿದೆ. ಮುಂಬೈನಲ್ಲಿ ಇಂತಹ ಘಟಕವಿದೆ. ನಗರದಲ್ಲೂ ಇಂತಹ ಘಟಕ ಸ್ಥಾಪಿಸಿ ಪರಿಸರ ಮಾಲಿನ್ಯ ನಿಯಂತ್ರಿಸಬಹುದು’ ಎಂದು ಇನ್ನೊಬ್ಬ ಉದ್ಯಮಿ ವಿನೋದ್‌ ಶರ್ಮ ಸಲಹೆ ನೀಡಿದರು.
**

ಅಂಕಿ–ಅಂಶ
2000 ‌
ನಗರದಲ್ಲಿರುವ ಫ್ಲೆಕ್ಸ್‌ ಮುದ್ರಣ ಘಟಕಗಳು

65
ಘಟಕಗಳನ್ನು ಪಾಲಿಕೆ ಅಧಿಕಾರಿಗಳು ಮುಚ್ಚಿಸಿದ್ದಾರೆ
**

ಪಾಲಿಕೆಯವರು ನಮಗಾಗುವ ನಷ್ಟ ಭರಿಸಿಕೊಡಲಿ ಅಥವಾ ಪರ್ಯಾಯ ಮಾರ್ಗೋಪಾಯ ಹುಡುಕಲು ಕಾಲಾವಕಾಶ ನೀಡಲಿ.
ಎಸ್‌.ಎನ್‌.ಕೃಷ್ಣಪ್ಪ, ಫ್ಲೆಕ್ಸ್‌ ಪ್ರಿಂಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !