ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಪಯಣ ಇನ್ನೂ ಹೈರಾಣ

Last Updated 29 ಏಪ್ರಿಲ್ 2018, 6:37 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಿಂದ ಮೈಸೂರಿಗೆ ತಲುಪುವ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಮೆಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಹಾಗೂ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಹೊಂಡಗಳಿಂದ ಮೈಸೂರಿಗೆ ರಸ್ತೆ ಮಾರ್ಗದಲ್ಲಿ ತಲುಪುವುದು ಪ್ರಯಾಣಿಕರಿಗೆ ತ್ರಾಸದಾಯಕವಾಗಿದೆ.

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಉದ್ದಕ್ಕೂ ಕಾಮಗಾರಿ ನಡೆಯುತ್ತಿದೆ. ದೊಡ್ಡರಾಯನಪೇಟೆ ಅಡ್ಡ ರಸ್ತೆಯಿಂದ ಮಸಗಾಪುರದ ಬಳಿವರೆಗೆ ಅರ್ಧ ರಸ್ತೆ ಬಂದ್ ಮಾಡಿ 3 ತಿಂಗಳು ಕಳೆಯುತ್ತಾ ಬಂದರೂ ಕಾಮಗಾರಿ ಆರಂಭವಾಗಿಲ್ಲ. ಒಂದಿಷ್ಟು ಹಳ್ಳ ತೋಡಿ ಮರಳಿನ ಮೂಟೆಗಳಿಗೆ ರಿಫ್ಲೆಕ್ಟರ್‌ಗಳನ್ನು ಅಂಟಿಸಿರುವುದನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ಆಗಿಲ್ಲ. ಹೀಗಿದ್ದರೂ, ಮಾದಾಪುರದಿಂದ ಮುಂದೆ ಅಲ್ಲಲ್ಲಿ ಇದೇ ರೀತಿ ಅರ್ಧರಸ್ತೆಯನ್ನು ಬಂದ್ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಬೆಂಡರವಾಡಿ ಹಾಗೂ ಬದನವಾಳಿನ ಸಮೀಪ ಕಾಮಗಾರಿ ನಡೆಯುತ್ತಿದೆ. ಇದರಿಂದ ಇಲ್ಲೂ ನಿಗದಿತ ಅವಧಿಯಲ್ಲಿ ಮೈಸೂರನ್ನು ತಲುಪಲಾಗುತ್ತಿಲ್ಲ. ಬದಲಿ ರಸ್ತೆಯನ್ನು ನಿರ್ಮಿಸದೇ ಇರುವುದು, ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇದಕ್ಕೆ ಕಾರಣ ಎನಿಸಿದೆ.

ಹೊಂಡದ ರಸ್ತೆಗಳು: ಇಲ್ಲಿಂದ ಸಂತೇಮರಹಳ್ಳಿಗೆ ಹೋಗುವ ರಸ್ತೆಯ ದೊಡ್ಡ ರಾಯನಪೇಟೆ ಅಡ್ಡರಸ್ತೆ ಬಳಿ ಭಾರಿ ಗಾತ್ರದ ಹೊಂಡ ನಿರ್ಮಾಣಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಜಿಲ್ಲಾಕೇಂದ್ರದಿಂದ ತಿ.ನರಸೀಪುರ, ಯಳಂದೂರು, ಕೊಳ್ಳೇಗಾಲ, ಸಂತೇಮರಹಳ್ಳಿಗೆ ಸಂಪರ್ಕ ಬೆಸೆಯುವ ಪ್ರಮುಖ ರಸ್ತೆ ಇದಾಗಿದೆ. ಇದರ ಜತೆಗೆ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209 ಸಹ ಇದಾಗಿದೆ. ಇದರಿಂದ ಇಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಾಜ್ಯ, ಅಂತರರಾಜ್ಯ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಇಷ್ಟಾದರೂ ಹೊಂಡ ಉಂಟಾಗಿ ಮೂರು ತಿಂಗಳು ಕಳೆದರೂ ಅದನ್ನು ಮುಚ್ಚುವ ಕೆಲಸಕ್ಕೆ ಯಾರೂ ಕೈ ಹಾಕಿಲ್ಲ.

ಅಪಾಯ ಹೇಗೆ?
ಚಾಮರಾಜನಗರದಿಂದ ಹೋಗುವಾಗ ರಸ್ತೆಯ ಎಡಭಾಗದಲ್ಲಿ ಈ ಹೊಂಡ ಇದೆ. ಇಲ್ಲಿ ದ್ವಿಚಕ್ರ ವಾಹನ ಸವಾರರು ವಾಹನ ಇಳಿಸಿದರೆ ಆಯತಪ್ಪಿ ಬೀಳುವುದು ನಿಶ್ಚಿತ ಎಂಬಂತಾಗಿದೆ. ಇದರ ಜತೆಗೆ, ಗುಂಡಿ ನೋಡಿ ತಕ್ಷಣ ವೇಗ ಕಡಿಮೆ ಮಾಡಿದರೆ ಹಿಂದಿನಿಂದ ಬರುವ ವಾಹನ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ.

ಬಹಳಷ್ಟು ಮಂದಿ ಗುಂಡಿಯನ್ನು ತಪ್ಪಿಸಲು ಬಲಕ್ಕೆ ವಾಹನ ಚಲಾಯಿಸುತ್ತಾರೆ. ಆಗ ಎದುರಿನಿಂದ ವೇಗವಾಗಿ ಬರುವ ವಾಹನ ಡಿಕ್ಕಿ ಹೊಡೆಯುವ ಸಂಭವ ಇದೆ. ಈಗಾಗಲೇ ಸಾಕಷ್ಟು ಮಂದಿ ವಾಹನ ಸವಾರರಿಗೆ ಇಲ್ಲಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಕೂದಲೆಳೆ ಅಂತರದಿಂದ ದೊಡ್ಡ ಅಪಘಾತಗಳು ತಪ್ಪಿವೆ. ಇಷ್ಟಾದರೂ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿದೆ.

ಏನು ಮಾಡಬೇಕಿತ್ತು?: ತಕ್ಷಣಕ್ಕೆ ಈ ದೊಡ್ಡ ಹೊಂಡವನ್ನು ಮುಚ್ಚುವಷ್ಟು ಶಕ್ತಿ ಅಧಿಕಾರಿಗಳ ಬಳಿ ಇಲ್ಲದಿದ್ದರೂ ಪರವಾಗಿಲ್ಲ. ಕನಿಷ್ಠ ಪಕ್ಷ ಸ್ವಲ್ಪ ದೂರದಲ್ಲೇ ಎಚ್ಚರಿಕೆ ಫಲಕ ಹಾಕಬಹುದು. ಬ್ಯಾರಿಕೇಡ್ ನಿಲ್ಲಿಸಿ, ಅದಕ್ಕೊಂದು ರಿಫ್ಲೆಕ್ಟರ್ ಅಂಟಿಸಿ ದೂರದಿಂದಲೇ ವಾಹನ ಸವಾರರಿಗೆ ಇಲ್ಲೊಂದು ಹೊಂಡ ಇದೆ ಎಂದು ಗಮನ ಸೆಳೆಯುವ ಕೆಲಸವನ್ನಾದರೂ ಮಾಡಬಹುದಿತ್ತು. ಆದರೆ, ಯಾರಿಗೂ ವಾಹನ ಸವಾರರ ಮೇಲೆ ಕಿಂಚಿತ್ ಕಾಳಜಿ ಇಲ್ಲ ಎಂದು ವ್ಯಾಪಾರಿ ಶಿವಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

ಸದ್ಯ, ಇದಕ್ಕೊಂದು ಮಣ್ಣು ಸುರಿದು ತೇಪೆ ಹಾಕುವ ಕಾರ್ಯ ನಡೆದಿದೆಯಾದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಲಾರಿ, ಬಸ್‌ ಹಿಂದೆ ಅಥವಾ ಮುಂದೆ ಹೋಗುವ ವಾಹನ ಸವಾರರನ್ನು ದೇವರೇ ಕಾಪಾಡಬೇಕು ಎಂಬಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT