ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್‌ನಲ್ಲಿ ಅಗ್ನಿ ಅನಾಹುತ: 64 ಸಾವು

ರಷ್ಯಾದ ಕೆಮೆರೊವ್‌ ನಗರದಲ್ಲಿ ಘಟನೆ
Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಾಸ್ಕೊ, ರಷ್ಯಾ: ಸೈಬೀರಿಯಾದ ಕೆಮೆರೊವ್‌ ನಗರದ ನಾಲ್ಕು ಮಹಡಿಯ ಶಾಪಿಂಗ್‌ ಮಾಲ್‌ವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 64 ಮಂದಿ ಮೃತಪಟ್ಟಿದ್ದಾರೆ.

‘ವಿಂಟರ್‌ ಚೆರ‍್ರಿ ಶಾಪಿಂಗ್‌ ಮಾಲ್‌ನಲ್ಲಿ ಭಾನುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಳಗಿನವರೆಗೂ ಹೊತ್ತಿ ಉರಿದಿದೆ. ಶಾಲೆಗೆ ರಜಾ ದಿನವಾದ ಕಾರಣ ಮಕ್ಕಳು ಮತ್ತು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

‘ಅನಾಹುತ ನಡೆಯುವ ವೇಳೆ ಯಾವುದೇ ಎಚ್ಚರಿಕೆ ಗಂಟೆ ಮೊಳಗಿರಲಿಲ್ಲ. ಮಾಲ್‌ನಲ್ಲಿರುವ ಸಿನಿಮಾ ಮಂದಿರದ ಒಳಗೂ ಮೃತದೇಹಗಳು ಪತ್ತೆಯಾಗಿವೆ’ ಎಂದೂ ತಿಳಿಸಿದ್ದಾರೆ.

‘ನಾಲ್ಕನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಅನಂತರ ಅದು ಎಲ್ಲಾ ಕಡೆ ವ್ಯಾಪಿಸಿದೆ. ಮೇಲ್ಚಾವಣಿ ಕೂಡ ಕುಸಿದಿದೆ’ ಎಂದಿದ್ದಾರೆ.

‘ಗಾಯಗೊಂಡಿರುವ ಹತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕನೇ ಮಹಡಿಯಿಂದ ಜಿಗಿದು 11 ವರ್ಷದ ಬಾಲಕನೊಬ್ಬ ತೀವ್ರ ಗಾಯಗೊಂಡಿದ್ದಾನೆ. ಆತನ ಸಹೋದರ ಹಾಗೂ ಪಾಲಕರು ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಗ್ನಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ.  ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ 500 ಕ್ಕಿಂತಲೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ’ ಎಂದಿದ್ದಾರೆ.

‘ಬೆಂಕಿ ಕಾಣಿಸಿಕೊಂಡ ತಕ್ಷಣ ಜನರನ್ನು ಹೊರಗೆ ಕಳುಹಿಸಲು ಮಾಲ್‌ನ ಸಿಬ್ಬಂದಿ ಮುಂದಾಗಿಲ್ಲ’ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

‘2013ರಲ್ಲಿ ಮಿಠಾಯಿ ಕಾರ್ಖಾನೆಯನ್ನು ಶಾಪಿಂಗ್‌ ಮಾಲ್‌ ಆಗಿ ಪರಿವರ್ತನೆ ಮಾಡಲಾಗಿತ್ತು ಮತ್ತು ಅಗ್ನಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿರಲಿಲ್ಲ. ಒಳಾಂಗಣ ಸ್ಕೇಟಿಂಗ್ ಕ್ರೀಡೆಗೂ ಅವಕಾಶವಿದ್ದು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.

10 ವರ್ಷಗಳಲ್ಲೇ ರಷ್ಯಾದಲ್ಲಿ ನಡೆದ ಅತೀ ಭೀಕರ ಅಗ್ನಿ ದುರಂತ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT