ಬೆಂಗಳೂರು: ಲಾಲ್‌ಬಾಗ್ ಉದ್ಯಾನದಲ್ಲಿ ಈ ಆಗಸ್ಟ್‌ನಲ್ಲಿ ನಡೆಯಬೇಕಿದ್ದ ‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ’ ಕೋವಿಡ್ ಕಾರಣದಿಂದ ರದ್ದಾಗಿದೆ.
ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘಗಳು ವರ್ಷಕ್ಕೆ ಎರಡು ಬಾರಿ ಉದ್ಯಾನದಲ್ಲಿಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದ್ದವು.
ಕೋವಿಡ್ ತೀವ್ರಗೊಂಡಿರುವ ಸ್ಥಿತಿಯಲ್ಲಿಪ್ರದರ್ಶನಕ್ಕೆ ಹೆಚ್ಚು ಜನ ಸೇರುವುದು ಅಪಾಯ ಎಂಬ ಉದ್ದೇಶದಿಂದ ಕಳೆದ ಆಗಸ್ಟ್‌ನಲ್ಲಿ ಹಾಗೂ ಜನವರಿಯಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಗಳು ರದ್ದಾಗಿದ್ದವು.
ಎರಡನೇ ಅಲೆಯ ತೀವ್ರತೆ ತಗ್ಗಿದ್ದರಿಂದ ಆಗಸ್ಟ್‌ನಲ್ಲಿ ಪ್ರದರ್ಶನ ಆಯೋಜಿಸುವ ಉದ್ದೇಶವೂ ಹೊಂದಿತ್ತು. ಆದರೆ, ಮೂರನೇ ಅಲೆಯ ಬಗ್ಗೆ ತಜ್ಞರು ಸುಳಿವು ನೀಡಿರುವುದಿಂದ ಈ ಬಾರಿಯೂ ಪ್ರದರ್ಶನ ನಡೆಸದಿರಲು ನಿರ್ಧರಿಸಲಾಗಿದೆ.
‘ಆಗಸ್ಟ್‌ನಲ್ಲಿ ಪ್ರದರ್ಶನ ನಡೆಸಲು ಬಹುತೇಕ ಸಿದ್ಧತೆಗಳು ಅಂತಿಮ ಹಂತ ತಲುಪಿರುತ್ತಿತ್ತು. ಕೋವಿಡ್ ಮೂರನೇ ಅಲೆಯ ಸಂಭವ ಇರುವುದರಿಂದ ಫಲಪುಷ್ಪ ಪ್ರದರ್ಶನಕ್ಕೆ ಯಾವುದೇ ತಯಾರಿ ನಡೆದಿಲ್ಲ. ಪ್ರದರ್ಶನ ನಡೆಯುವುದು ಬಹುತೇಕ ಅನುಮಾನ. ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಈ ನಿರ್ಣಯ ಅಂತಿಮಗೊಳ್ಳಲಿದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸ್ಪರ್ಧೆಗಳೂ ರದ್ದು: ಪ್ರದರ್ಶನದ ವೇಳೆ ಆಯೋಜಿಸಲಾಗುತ್ತಿದ್ದ ಕಿರು ತೋಟಗಳ ಸ್ಪರ್ಧೆ, ಟೆರೇಸ್ ಗಾರ್ಡನ್ ಸ್ಪರ್ಧೆ, ಇಲಾಖಾವಾರು ಅಲಂಕಾರಿಕ ಸ್ಪರ್ಧೆ, ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರ್ ಕಲೆ ಹಾಗೂ ಬೊನ್ಸಾಯ್ (ಕುಬ್ಜ ಮರ) ಸ್ಪರ್ಧೆ ಮತ್ತು ಪ್ರದರ್ಶನಗಳೂ ಈ ಬಾರಿ ಇರುವುದಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.