ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ.ಸಿ. ರಸ್ತೆ ಮೇಲ್ಸೇತುವೆ | ₹270 ಕೋಟಿಗೆ ಏರಿದ ಮೇಲ್ಸೇತುವೆ ವೆಚ್ಚ

ಜೆ.ಸಿ. ರಸ್ತೆ ಮೇಲ್ಸೇತುವೆ l ಅನುಮೋದನೆ ಕುರಿತು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಭೆಯಲ್ಲಿ ಇಂದು ಚರ್ಚೆ
Last Updated 19 ಡಿಸೆಂಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಸಿ. ರಸ್ತೆ ಮೇಲ್ಸೇತುವೆ ಅಂದಾಜು ವೆಚ್ಚ ₹50 ಕೋಟಿಯಷ್ಟು ಹೆಚ್ಚಾಗಿದ್ದು, ₹220 ಕೋಟಿಯಿಂದ ₹270 ಕೋಟಿಗೆ ತಲುಪಿದೆ.

ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಭೆಯಲ್ಲಿ ಮಂಗಳವಾರ ಈ ಯೋಜನೆಯ ಅನುಮೋದನೆ ಬಗ್ಗೆ ಚರ್ಚೆ ನಡೆಯಲಿದೆ.

ಮಿನರ್ವ ವೃತ್ತದಿಂದ ಟೌನ್‌ಹಾಲ್‌ಮೂಲಕ ಹಡ್ಸನ್‌ ವೃತ್ತದವರೆಗೆ ಏಳು ಜಂಕ್ಷನ್‌ಗಳಲ್ಲಿ ಸಿಗ್ನಲ್‌ಮುಕ್ತ ಸಂಚಾರವನ್ನು ಈ ಮೇಲ್ಸೇತುವೆ ಒದಗಿಸಲಿದೆ. ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ರಾಜ್ಯ ಸರ್ಕಾರ ₹220 ಕೋಟಿಯನ್ನು
ಜೆ.ಸಿ. ರಸ್ತೆ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಿದೆ. ಯೋಜನೆಯ ತಾಂತ್ರಿಕ ವಿವರಗಳನ್ನು ಟಿಎಸಿ ಅಂತಿಮಗೊಳಿಸುವುದು ವಿಳಂಬವಾದ್ದರಿಂದ ಯೋಜನೆ ವೆಚ್ಚ ಹೆಚ್ಚಾಗಲಿದೆ ಎಂದು ಬಿಬಿಎಂಪಿ ಆತಂಕ ವ್ಯಕ್ತಪಡಿಸಿದೆ.

ಮೊದಲು 2014ರಲ್ಲಿ ಈ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ಯೋಜಿಸಿತ್ತು. 2018ರಲ್ಲಿ ಯೋಜನೆಯನ್ನು ಕೈಬಿಟ್ಟಿತ್ತು. ಬಿಬಿಎಂಪಿಯು ಪ್ರಸ್ತುತ 1.8 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿದ್ದು,ಇದರಿಂದ ಸಂಚಾರ ದಟ್ಟಣೆ ಶೇ 46ಷ್ಟು ಕಡಿಮೆಯಾಗಲಿದೆ. ಮಿನರ್ವಾ ವೃತ್ತ ಮತ್ತು ಆರ್‌.ವಿ. ರಸ್ತೆಯಲ್ಲಿ ‍ರ‍್ಯಾಂಪ್‌ ನಿರ್ಮಾಣವಾಗಲಿದೆ.

ಹಡ್ಸನ್‌ ವೃತ್ತದಲ್ಲಿ ಮೆಜೆಸ್ಟಿಕ್‌ ಹಾಗೂ ಕಸ್ತೂರ ಬಾ ರಸ್ತೆ ಕಡೆಗೆ ರ‍್ಯಾಂಪ್‌ ಇರಲಿದೆ. ನೃಪತುಂಗ ರಸ್ತೆ ಹಾಗೂ ರಾಜರಾಮ್‌ಮೋಹನ್‌ ರಾಯ್‌ ರಸ್ತೆ ಕಡೆಗೂ ರ‍್ಯಾಂಪ್‌ ನಿರ್ಮಿಸುವ ವಿಷಯವನ್ನು ಪ್ರಸ್ತಾಪಿಸಲಾಗಿದೆ.

‘ಈ ಯೋಜನೆ ದಕ್ಷಿಣ ಬೆಂಗಳೂರಿನ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಿದೆ. ಮಿನರ್ವ ವೃತ್ತ, ಟೌನ್‌ ಹಾಲ್‌, ಹಡ್ಸನ್‌ ವೃತ್ತ, ಊರ್ವಶಿ ಚಿತ್ರಮಂದಿರ, ಹಲಸೂರು ಗೇಟ್‌ ಪೊಲೀಸ್‌ ಸ್ಟೇಷನ್‌ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಈ ಮೇಲ್ಸೇತುವೆ ಮಾರ್ಗದಲ್ಲೇ ಬಿಎಂಆರ್‌ಸಿಎಲ್‌ ಕೂಡ ಸುರಂಗ ಮಾರ್ಗ ನಿರ್ಮಿಸಲು ಪ್ರಸ್ತಾಪಿಸಿದ್ದು, ಸರ್ಜಾಪುರ ಮತ್ತು ಹೆಬ್ಬಾಳವನ್ನು ಸಂಪರ್ಕಿಸಲಿದೆ. ಟೌನ್‌ಹಾಲ್‌ನಲ್ಲಿ ಮೆಟ್ರೊ ಸ್ಟೇಷನ್‌ ನಿರ್ಮಾಣವಾಗಲಿದ್ದು, ಜೆ.ಸಿ. ರಸ್ತೆ ಮತ್ತು ನೃಪತುಂಗ ರಸ್ತೆಯಡಿ ಮೆಟ್ರೊ ಸಾಗಲಿದೆ.

‘ಸಣ್ಣ ಯೋಜನೆಗಳಿಗೆ ಸಾಕಷ್ಟು ಅನುದಾನ ಬಳಕೆಯಾಗುತ್ತಿದ್ದು, ಇದರಿಂದ ನಗರದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಜೆ.ಸಿ. ರಸ್ತೆಯ ಮೇಲ್ಸೇತುವೆ ನಿರ್ಮಾಣದಿಂದ ಪರಿಹಾರ ಸಿಗಲಿದೆ. ಈ ಯೋಜನೆ ಖಂಡಿತ ಆರಂಭವಾಗಲಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT