ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೀವ್ರವಾಗಲಿದೆ ಆಹಾರ ಸಮಸ್ಯೆ’: ಆತಂಕ ವ್ಯಕ್ತಪಡಿಸಿದ ‘ನಾವು ಭಾರತೀಯರು’ ಸಂಸ್ಥೆ

Last Updated 5 ಏಪ್ರಿಲ್ 2020, 21:25 IST
ಅಕ್ಷರ ಗಾತ್ರ

ಬೆಂಗಳೂರು: ಪಡಿತರ ಮತ್ತು ಬೇಯಿಸಿದ ಆಹಾರವನ್ನು ಪೂರೈಸುವ ಸರ್ಕಾರದ ಯೋಜನೆಯಲ್ಲಿ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತಿದ್ದು, ಮುಂದೆ ರಾಜ್ಯದಲ್ಲಿ ತೀವ್ರ ಆಹಾರ ಬಿಕ್ಕಟ್ಟು ಉಂಟಾಗಲಿದೆ ಎಂದು ‘ನಾವು ಭಾರತೀಯರು’ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

‘ರಾಜ್ಯದಲ್ಲಿ ಈಗಾಗಲೇ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿದೆ. ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಈಗ ಲಾಕ್‌ಡೌನ್‌ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಈ ನಡುವೆ, ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸುವ ಮೂಲಕ ಸರ್ಕಾರವು ಅಮಾನವೀಯವಾಗಿ ವರ್ತಿಸುತ್ತಿದೆ’ ಎಂದು ಸಂಘಟನೆಯ ಡಾ. ಸಿಲ್ವಿಯಾ ಕರ್ಪಗಂ ದೂರಿದ್ದಾರೆ.

‘ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಬೀದಿಬದಿ ವ್ಯಾಪಾರಿಗಳು ಮತ್ತು ಸ್ವಸಹಾಯ ಸಂಘಗಳನ್ನು ಒಳಗೊಂಡ ಸಾಮುದಾಯಿಕ ಅಡುಗೆ ಮನೆಗಳ ಮೂಲಕ ತಾಜಾ ಮತ್ತು ಬೇಯಿಸಿದ ಆಹಾರವನ್ನು ಉಚಿತವಾಗಿ ನೀಡಬೇಕು. ಇಂದಿರಾ ಕ್ಯಾಂಟೀನ್‌ ಮೂಲಕವೂ ಉಚಿತವಾಗಿ ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಅಗತ್ಯವಿರುವ ಎಲ್ಲರಿಗೂ ಪಡಿತರ ಕಿಟ್‌ ವಿತರಿಸಬೇಕು, ಹಾಪ್‌ಕಾಮ್ಸ್‌ ಮೂಲಕ ಹಣ್ಣು, ತರಕಾರಿ ಮತ್ತು ಮೊಟ್ಟೆ, ಮಾಂಸವನ್ನು ಕಡಿಮೆ ದರದಲ್ಲಿ ಒದಗಿಸಬೇಕು. ಅಂಗನವಾಡಿಗಳು ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸರಬರಾಜು ಮಾಡುವುದನ್ನು ಮುಂದುವರಿಸಬೇಕು, ಮಕ್ಕಳು ಮತ್ತು ಗರ್ಭಿಣಿಯರಿಗೆ ವಾರದ ಐದು ದಿನ ಮೊಟ್ಟೆಗಳನ್ನು ನೀಡಬೇಕು, ಉಜ್ವಲ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದು ಸಂಘಟನೆಯ ಸಿದ್ಧಾರ್ಥ್‌ ಜೋಶಿ ಹಾಗೂ ವಿನಯ್‌ ಶ್ರೀನಿವಾಸ ಸಲಹೆ ನೀಡಿದ್ದಾರೆ.

ದಿನಸಿ ಅಭಾವ: ಎಎಪಿ ಕಳವಳ

ಬೆಂಗಳೂರು: ನಗರದ ದಿನಸಿ ಅಂಗಡಿಗಳಲ್ಲಿ ದಿನಸಿ ಪದಾರ್ಥಗಳ ಅಭಾವ ಎದುರಾಗಿದ್ದು, ಇನ್ನೆರಡು ದಿನಗಳಿಗಾಗುವಷ್ಟು ಮಾತ್ರ ದಾಸ್ತಾನು ಇದೆ ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ಕಳವಳ ವ್ಯಕ್ತಪಡಿಸಿದೆ.

ಪಕ್ಷದ ಕಾರ್ಯಕರ್ತರು ಭಾನುವಾರ ಕೆಲ ದಿನಸಿ ಅಂಗಡಿಗಳಿಗೆ ಭೇಟಿ ನೀಡಿ, ವ್ಯಾಪಾರಿಗಳ ಬಳಿ ದಾಸ್ತಾನು ಕುರಿತು ಮಾಹಿತಿ ಪಡೆದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೇ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ, ನಗರದ ಎಲ್ಲ ಪ್ರದೇಶದಲ್ಲೂ ದಿನಸಿ ಸಾಮಗ್ರಿಗಳು ಸಮರ್ಪಕವಾಗಿ ಸಿಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ಪಕ್ಷದ ಬೆಂಗಳೂರು ನಗರದ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT