ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂದ್’ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಕರ್ನಾಟಕ ಬಂದ್‌: ಕಾರ್ಯಕರ್ತರ ಧರಣಿ, ಪೊಲೀಸರಿಂದ ಬಂಧನ, ಬಿಡುಗಡೆ
Last Updated 29 ಮೇ 2018, 11:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಕೂಡಲೇ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ‘ಕರ್ನಾಟಕ ಬಂದ್‌‘ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಚಿಂತಾಮಣಿ ಹಾಗೂ ಬಾಗೇಪಲ್ಲಿ ಯಲ್ಲಿ ಬೆಳಿಗ್ಗೆ ಪ್ರತಿಭಟನಾನಿರತ ಕೆಲ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಆ ಮೂಲಕ ಬಂದ್ ಆಚರಣೆಗೆ ಕಡಿವಾಣ ಹಾಕಿದರು. ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ಹಾಗೂ ಗುಡಿಬಂಡೆ ತಾಲ್ಲೂಕಿನಲ್ಲಿ ಬಂದ್‌ಗೆ ಬೆಂಬಲ ಸಿಗಲಿಲ್ಲ.

ನಗರದಲ್ಲಿ ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೆಲವು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚುವಂತೆ ಮನವಿ ಮಾಡಿದರು. ಆದರೆ ಅದಕ್ಕೆ ಅಂಗಡಿ ಮಾಲೀಕರು ಸ್ಪಂದಿಸಲಿಲ್ಲ.

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಂಜುನಾಥ್, ‘ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಮಾತು ಬದಲಾಯಿಸಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನುಡಿದಂತೆ ನಡೆದಿಲ್ಲ’ ಎಂದು ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಬಂದ್‌ ಬೆಂಬಲ ನೀಡುವಂತೆ ಸಾರ್ವಜನಿಕರನ್ನು ಶಾಂತಿಯುತವಾಗಿ ಮನವಿ ಮಾಡಲಾಗುತ್ತಿದೆ. ಆದರೆ, ಪೊಲೀಸರು ಇದಕ್ಕೂ ನಿರ್ಬಂಧ ಹೇರಿದ್ದಾರೆ. ಕಾರ್ಯಕರ್ತರನ್ನು ಬಂಧಿಸುವ ಮೂಲಕ ಬಂದ್‌ ವಿಫಲಗೊಳಿಸುವ ಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.

‘ಪ್ರತಿಭಟನೆ ತಡೆಯಲು ಪೊಲೀಸರ ಕಾವಲಿನಲ್ಲಿ ಕೆ.ಎಸ್‍.ಆರ್‌.ಟಿ.ಸಿ ಬಸ್‌ಗಳನ್ನು ರಸ್ತೆಗಿಳಿಸಿದೆ. ಇದು ರಾಜ್ಯ ಸರ್ಕಾರಕ್ಕೆ ನಾಚಿಕೆಗೇಡು ವಿಚಾರ’ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇನ್ನೂ 6 ತಿಂಗಳು ಇರುವುದಿಲ್ಲ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನತೆಗೆ ತಟ್ಟದ ಬಂದ್ ಬಿಸಿ

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಸಾರಿಗೆ ಸಂಚಾರದಲ್ಲೂ ಯಾವುದೇ ಅಡಚಣೆ ಇರಲಿಲ್ಲ. ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು, ಕಚೇರಿಗಳು, ಆಸ್ಪತ್ರೆಗಳು, ಚಿತ್ರಮಂದಿರಗಳು, ಜಿಲ್ಲಾಡಳಿತ ಎಂದಿನಂತೆ ಕಾರ್ಯನಿರ್ವಹಿಸಿದವು. ಅಧಿಕಾರಿಗಳು, ಸಿಬ್ಬಂದಿ ಕಚೇರಿಗೆ ಆಗಮಿಸಿ ತಮ್ಮ ಕೆಲಸ ಕಾರ್ಯಗಳಲ್ಲಿ ಸರಾಗವಾಗಿ ನಡೆಸಿಕೊಂಡು ಹೋದರು.

ಬಂದ್‌ನಿಂದ ದೂರ ಸರಿದ ಸಂಘಟನೆಗಳು

ಬಿಜೆಪಿ ಹೊರೆತು ಪಡಿಸಿ ಬಂದ್‌ಗೆ ರೈತ ಸಂಘಟನೆಗಳು, ನೀರಾವರಿ ಹೋರಾಟಗಾರರು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಯಾವುದೇ ಪ್ರಗತಿ ಪರ ಸಂಘಟನೆಗಳು ಬೆಂಬಲ ನೀಡಿಲ್ಲ. ಅಲ್ಲದೆ ‘ಬಂದ್’ ಸಂಬಂಧ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಶಿಡ್ಲಘಟ್ಟ: ಆರ್ಥಿಕ ಸಂಕಷ್ಟದಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ನಡೆದ ಕರ್ನಾಟಕ ಬಂದ್‌ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಸೋಮವಾರ ಬಸ್‌ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ. ನಂದೀಶ್‌ ಮಾತನಾಡಿ, ‘ವಚನ ಭ್ರಷ್ಟರಾಗಬೇಡಿ. ದಯವಿಟ್ಟು ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಜನಾದೇಶವಿಲ್ಲದ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳೇ ಜನಕ್ಕೆ ಒಳ್ಳೆಯದನ್ನು ಮಾಡಿ. ರೈತರ ಸಂಕಷ್ಟ ನಿವಾರಿಸಲು ಆದ್ಯತೆ ನೀಡಿ’ ಎಂದು ಆಗ್ರಹಿಸಿದರು.

ರೈತರಿಗೆ ನೆರವು ನೀಡದಿದ್ದ ಮೇಲೆ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ಕೃಷಿಗಾಗಿ ರೈತರು ಮಾಡಿದ ಸಾಲ ಮನ್ನಾ ಮಾಡದಿದ್ದರೆ ಅಪಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಪಕ್ಷ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿಯಾದ 24 ಗಂಟೆ ಒಳಗಾಗಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿಯಾದ ನಂತರ ತಮ್ಮ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಭರವಸೆ ಣೀಡಿ ರೈತರನ್ನು ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ ಎಂದು  ಆರೋಪಿಸಿದರು.

ಬಳುವನಹಳ್ಳಿ ಶ್ರೀಧರ್‌, ಸುಜಾತಮ್ಮ, ದಾಮೋದರ್‌, ಮಂಜುಳಮ್ಮ, ನಾಗೇಶ, ಪುರುಷೋತ್ತಮ, ವೆಂಕಟೇಶ, ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT