ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ನೌಕರರಿಂದ ಕಾಲ್ನಡಿಗೆ ಜಾಥಾ: ಸ್ವಾತಂತ್ರ್ಯ ಹೋರಾಟಗಾರರ ಸಾಧನೆಗಳ ಅರಿವು

Published 15 ಆಗಸ್ಟ್ 2024, 16:27 IST
Last Updated 15 ಆಗಸ್ಟ್ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ಮಹತ್ವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸಾಧನೆ ಕುರಿತು ಯುವಜನರಿಗೆ ಅರಿವು ಮೂಡಿಸಲು ಬಿಬಿಎಂಪಿ ನೌಕರರು ಕಾ‌ಲ್ನಡಿಗೆ ಜಾಥಾ ನಡೆಸಿದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಜಾಥಾಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌. ಉಮಾಶಂಕರ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್‌ ಅವರು ಚಾಲನೆ ನೀಡಿದರು.

‘ಬ್ರಿಟಿಷರು ನೂರಾರು ವರ್ಷಗಳ ಕಾಲ ಭಾರತದ ಮೇಲೆ ಪಾರುಪತ್ಯ ನಡೆಸಿದರು. ದೇಶದ ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ 1947ರಲ್ಲಿ ಸ್ವಾತಂತ್ರ್ಯ ಲಭಿಸಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಜವಾಹರ್ ಲಾಲ್ ನೆಹರೂ, ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್, ಸುಭಾಶ್ ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯ್ ಪಟೇಲ್ ಸೇರಿದಂತೆ ಅನೇಕ ಮಹನೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡಿದ ಪ್ರತಿಫಲ ಸ್ವಾತಂತ್ರ್ಯವಾಗಿ ನಾವು ಬಾಳಿ,ಬದುಕಲು ಸಾಧ್ಯವಾಯಿತು’ ಎಂದು ಕಾಲ್ನಡಿಗೆಯಲ್ಲಿ ಮಾಹಿತಿ ನೀಡಲಾಯಿತು.

‘ಸ್ವಾತಂತ್ರ್ಯ ದೊರಕಿದ ಬಳಿಕ ಸಂವಿಧಾನ ರಚನೆಯಾಗಿ ಮತದಾನ ಹಕ್ಕು, ವಾಕ್ ಸ್ವಾತಂತ್ರ್ಯ, ಶಾಂತಿ, ಸೌಹಾರ್ದ, ಸಮಾನತೆಯಿಂದ ಬಾಳಲು ಹಾಗೂ ಮಹಿಳೆಯರಿಗೆ ಸಮಾನತೆ ಹಕ್ಕು ನೀಡಲಾಯಿತು. ಸ್ವಾತಂತ್ರ್ಯ ಹೋರಾಟದ ಮಹತ್ವ ಅರಿತು ಮತ್ತು ಆ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಮಹನೀಯರ ಆದರ್ಶ ಸಿದ್ದಾಂತಗಳನ್ನು ಇಂದಿನ ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಕರೆ ನೀಡಲಾಯಿತು.

ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಎಸ್.ಜಿ.ಸುರೇಶ್, ಕೆ.ಜಿ.ರವಿ, ಡಿ.ರಾಮಚಂದ್ರ, ಡಾ.ಶೋಭಾ, ರೇಣುಕಾಂಬಾ, ಮಂಜೇಗೌಡ, ಬಿ.ರುದ್ರೇಶ್, ಮಂಜುನಾಥ್, ಸಂತೋಷ್ ಕುಮಾರ್ ನಾಯ್ಕ್, ಎಚ್.ಬಿ.ಹರೀಶ್, ಉಮೇಶ್, ಸಂತೋಷ್, ನರಸಿಂಹ ಪಾಲ್ಗೊಂಡಿದ್ದರು.

ಬಿಬಿಎಂಪಿ ಕೇಂದ್ರ ಕಚೇರಿಯಿಂದ ಆರಂಭವಾದ ಜಾಥಾ ಕಂಠೀರವ ಕ್ರೀಡಾಂಗಣ ಮಾರ್ಗವಾಗಿ ಕಬ್ಬನ್ ಪಾರ್ಕ್ ರಸ್ತೆ ಮೂಲಕ ಎಂ.ಜಿ.ರಸ್ತೆ ಪ್ರವೇಶ ದ್ವಾರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯಿರುವ ಆವರಣಕ್ಕೆ ತಲುಪಿತು. ಗಾಂಧೀಜಿಗೆ ಗೌರವ ನಮನ ಸಲ್ಲಿಸುವ ಮೂಲಕ ಜಾಥಾ ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT