ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಆಸ್ತಿ ರಕ್ಷಣೆಗೆ ಒಕ್ಕೊರಲ ಒತ್ತಾಯ

ಕಂಡವರ ಪಾಲಾಗುತ್ತಿರುವ ಬಿಬಿಎಂಪಿ ಭೂಮಿ
Last Updated 6 ಜುಲೈ 2018, 14:19 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಆಸ್ತಿ ರಕ್ಷಣೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತ ಸಹಮತ ವ್ಯಕ್ತವಾಯಿತು.

ಸಭೆಯ ಆರಂಭದಲ್ಲೇ ಪ್ರಸ್ತಾವ ತೆಗೆದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಲಾಫಿಂಗ್‌ ವಾಟರ್‌ ಲೇಔಟ್‌ನಲ್ಲಿ ಸುಮಾರು 40 ಎಕರೆ ಭೂಮಿಯನ್ನು ಬಿಬಿಎಂಪಿ ವಶಪಡಿಸಿಕೊಳ್ಳದೇ ಹಾಗೇ ಬಿಟ್ಟಿದೆ. ಇಂಥ ಹಲವಾರು ಆಸ್ತಿ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇರಲಿಲ್ಲ. ಆದ್ದರಿಂದ ಇಂಥ ಭೂಮಿಯನ್ನು ಗುರುತಿಸಿ ಪಾಲಿಕೆ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ರೀತಿಯ ಪ್ರಕರಣಗಳು ಮಹದೇವಪುರ, ಮಾರತ್‌ಹಳ್ಳಿ ಪ್ರದೇಶ ಸೇರಿದಂತೆ ಹಲವೆಡೆ ಇದೆ. ಅಲ್ಲಿ ಪಾಲಿಕೆ ಸದಸ್ಯರ ಕಚೇರಿ ತೆರೆಯಲೂ ಸ್ಥಳ ಇಲ್ಲವಾಗಿದೆ. ಪಾಲಿಕೆ ಆಸ್ತಿ ಕಂಡವರ ಪಾಲಾಗುತ್ತಿದೆ.ಇಂಥ ಸ್ಥಳಗಳಲ್ಲಿ ಬಿಬಿಎಂಪಿ ವತಿಯಿಂದ ಬೇಲಿ ಹಾಕಿ ರಕ್ಷಿಸಬೇಕು ಇತರ ಸದಸ್ಯರು ಒತ್ತಾಯಿಸಿದರು.

ಸುರಕ್ಷಿತ ನಗರ ಚರ್ಚೆ

ಸುರಕ್ಷಿತ ನಗರ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ₹ 667 ಕೋಟಿ ಮಂಜೂರು ಮಾಡಿದೆ. ಈ ಯೋಜನೆ ಅನುಷ್ಠಾನ ಸಂಬಂಧಿಸಿ ನಗರದಾದ್ಯಂತ ಕ್ಯಾಮೆರಾ ಅಳವಡಿಸುವಾಗ ಪಾಲಿಕೆ ಸದಸ್ಯರನ್ನೂ ಸಂಪರ್ಕಿಸಬೇಕು. ಸದಸ್ಯರ ಸಲಹೆ ಪಡೆದು ಆಯಕಟ್ಟಿನ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಬೇಕು ಎಂದು ಸದಸ್ಯರು ಸಲಹೆ ಮಾಡಿದರು.

ಸದಸ್ಯ ಕಟ್ಟೆ ಸತ್ಯನಾರಾಯಣ ಮಾತನಾಡಿ, ಬಿಬಿಎಂಪಿ ಶಾಲಾ ಆವರಣಗಳು ಗಾಂಜಾ ಮಾರಾಟ ತಾಣಗಳಾಗಿವೆ. ಯುವಜನರು ದಾರಿ ತಪ್ಪುತ್ತಿದ್ದಾರೆ. ಇಂಥ ಜಾಲಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯುವಜನರು ಹಾದಿತಪ್ಪಬಾರದು ಎಂದು ಹೇಳಿದರು.

ಮಾರತ್‌ಹಳ್ಳಿಯಲ್ಲಿ ಕೆರೆಗೆ ತ್ಯಾಜ್ಯ ನೀರು ನೇರವಾಗಿ ಹರಿಯುತ್ತಿದೆ. ಅಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನೇಕೆ ಸ್ಥಾಪಿಸಿಲ್ಲ? ಕೆರೆ ಮಲಿನವಾಗುವುದನ್ನು ಏಕೆ ತಡೆಯುತ್ತಿಲ್ಲ ಎಂದು ಜಲಮಂಡಳಿ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ವಾರ್ಡ್‌ ಬೇಸರ ವ್ಯಕ್ತಪಡಿಸಿದರು.

ಸಾಲ ಮನ್ನಾಕ್ಕೆ ಸದಸ್ಯರ ವೇತನ

ರೈತರ ಸಾಲ ಮನ್ನಾಕ್ಕೆ ಸದಸ್ಯರ ಒಂದು ತಿಂಗಳ ವೇತನ ಕೊಡಲು ಸಭೆ ಸಮ್ಮತಿಸಿತು. ಮೇಯರ್‌ ಆರ್‌.ಸಂಪತ್‌ರಾಜ್‌ ತಾವು ಎರಡು ತಿಂಗಳ ವೇತನ ನೀಡುವುದಾಗಿ ಘೋಷಿಸಿದರು. ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ‘ನನ್ನ ಒಂದು ತಿಂಗಳ ವೇತನ ಹಾಗೂ ವೈಯಕ್ತಿಕವಾಗಿ ₹ 1 ಲಕ್ಷ ನೀಡುವುದಾಗಿ’ ಪ್ರಕಟಿಸಿದರು.

ಸದಸ್ಯರಿಗೆ ತಲಾ ₹ 7,500 ವೇತನವಿದೆ. 198 ವಾರ್ಡ್‌ಗಳ ಸದಸ್ಯರ ವೇತನ ಸೇರಿದರೆ 14.85 ಲಕ್ಷ ಆಗುತ್ತದೆ.

ರೈತರಿಗೆ ನೆರವಾಗಲು ಪ್ರತಿ ಸದಸ್ಯರು ₹ 50 ಸಾವಿರ ಕೊಟ್ಟರೆ ಉತ್ತಮ ಎಂದುವೆಂಕಟೇಶ್‌ ಸಲಹೆ ಮಾಡಿದರು.

ನಿನ್ನ ಮನೆ ಕೆಲ್ಸ ಮಾಡಲು ಬಂದವಳೇನೇ?

‘ನಾನೇನು ನಿನ್ನ ಮನೆ ಕೆಲಸ ಮಾಡಲು ಬಂದವಳೇನೇ?’ ಹೀಗೆಂದು ಚಿಟಿಕೆ ಹಾರಿಸುತ್ತಾ ಉದ್ದಟತನದಿಂದ ಆರೋಗ್ಯ ವಿಭಾಗದ ಅಧಿಕಾರಿ ಮಂಜುಳಾ ಅವರು ಮಾತನಾಡುತ್ತಾರೆ ಎಂದು ಬಿಜೆಪಿ ಸದಸ್ಯೆ ದೀಪಾ ನಾಗೇಶ್‌ ದೂರಿದರು. ಮಂಜುಳಾ ಬಗ್ಗೆ ಹಲವಾರು ದೂರುಗಳಿವೆ. ಅವರನ್ನು ಸಭೆಗೆ ಕರೆಸಬೇಕು ಎಂದು ಆಡಳಿತ ಪಕ್ಷದ ಸದಸ್ಯರೂ ಧ್ವನಿಗೂಡಿಸಿದರು. ಸಭೆ ಮೊಟಕುಗೊಂಡದ್ದರಿಂದ ಮಂಜುಳಾ ಅವರನ್ನು ಕರೆಸಲು ಸಾಧ್ಯವಾಗಲಿಲ್ಲ.

ಕುಸಿದು ಬಿದ್ದ ರೂಪಾ

ಸಭೆ ವೇಳೆ ವಾರ್ಡ್‌ ಸಂಖ್ಯೆ 106ರ ಸದಸ್ಯೆ ರೂಪಾ ಲಿಂಗೇಶ್ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಸಭೆಯಿಂದ ಹೊರಕ್ಕೆ ಕರೆತರಲಾಯಿತು. ಉಸಿರಾಟದ ಸಮಸ್ಯೆಯಿಂದ ಬಳಲಿದ ಅವರಿಗೆ ಸ್ಥಳದಲ್ಲಿದ್ದ ಬಿಬಿಎಂಪಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಚೇತರಿಸಿಕೊಂಡಿದ್ದಾರೆ ಎಂದು ಅವರ ಪತಿ ಲಿಂಗೇಶ್‌ ತಿಳಿಸಿದರು. ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT