ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆರೆಯಾಗದ ಚಿರತೆ: ಆತಂಕದಲ್ಲಿ ಜನತೆ

ಅರಣ್ಯ ಸಿಬ್ಬಂದಿ ಗಸ್ತು, ಬೋನು ಅಳವಡಿಕೆ
Last Updated 3 ಡಿಸೆಂಬರ್ 2022, 18:33 IST
ಅಕ್ಷರ ಗಾತ್ರ

ಕೆಂಗೇರಿ: ತುರಹಳ್ಳಿ ಅರಣ್ಯ ವ್ಯಾಪ್ತಿಯ ಕೋಡಿಪಾಳ್ಯ ಹಾಗೂ ಗಾಣಕಲ್ಲು ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಚಿರತೆ ಸೆರೆ ಸಿಕ್ಕಿಲ್ಲ. ಇದು ಸ್ಥಳೀಯರಲ್ಲಿ ಮತ್ತಷ್ಟು ಭಯ ಹೆಚ್ಚಿಸಿದೆ.

ಬುಧವಾರ ಮಧ್ಯರಾತ್ರಿ ಕೆಂಗೇರಿ ಬಳಿಯ ಶ್ರೀಧರ ಗುಡ್ಡೆದ ಜನವಸತಿ ಪ್ರದೇಶದಲ್ಲಿ ಚಿರತೆಯು ಜಿಂಕೆಯನ್ನು ಬೇಟೆಯಾಡಿತ್ತು. ಬಳಿಕ, ಸುತ್ತಮುತ್ತಲ ಪ್ರದೇಶದಲ್ಲೇ ಚಿರತೆ ಸುಳಿದಾಡುತ್ತಿರುವ ಅನುಮಾನ ವ್ಯಕ್ತವಾಗಿದೆ.

ಶುಕ್ರವಾರ ರಾತ್ರಿ ಗಾಣಕಲ್ ಗ್ರಾಮದ ಸುತ್ತ ಚಿರತೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭೀತಿ ಹೆಚ್ಚಿಸಿದೆ. ಬಿಜಿಎಸ್ ಹೈಸ್ಕೂಲ್, ಬಿಜಿಎಸ್ ಎಂಜಿನಿಯರಿಂಗ್ ಕಾಲೇಜು, ಆರ್‌ಎನ್‌ಎಸ್ ಕಾಲೇಜಿಗೆ ಬರುವ ಸುತ್ತಮುತ್ತಲ ವಿದ್ಯಾರ್ಥಿಗಳು ತುರಹಳ್ಳಿ ಅರಣ್ಯ ರಸ್ತೆಯ ಮೂಲಕವೇ ಹಾದು ಹೋಗಬೇಕಾಗಿದೆ. ಇದರಿಂದ ಪೋಷಕರು ಆತಂಕಗೊಂಡಿದ್ದಾರೆ.

ಚಿರತೆ ಪ್ರತ್ಯಕ್ಷವಾದ ನಂತರ ತುರಹಳ್ಳಿ ಸುತ್ತಮತ್ತಲ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಗಸ್ತು ನಡೆಸಿದ್ದಾರೆ. ಚಿರತೆ ಹಿಡಿಯಲು ತುರಹಳ್ಳಿ ಬಳಿಯ ಇಂಟಿಗ್ರೇಟೆಡ್ ಕಮ್ಯೂನಿಟಿ ಹಾಲ್ ಬಳಿ ಬೋನು ಅಳವಡಿಸಲಾಗಿದೆ. ತುರಹಳ್ಳಿ ಅರಣ್ಯ ವಲಯದಲ್ಲಿ ಕೇವಲ ಒಂದು ಚಿರತೆ ಸಂಚಾರವಿದೆ. ಹಗಲಿನ ವೇಳೆ ಚಿರತೆ ಸಂಚಾರ ವಿರಳವಾಗಿದ್ದು, ಜನ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ಚಿರತೆ ಸೆರೆ ಹಿಡಿಯಲಾಗುವುದು ಎಂದು ಕಗ್ಗಲೀಪುರ ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಗೋವಿಂದರಾಜು ಹೇಳಿದರು.

ಕಳೆದ ನಾಲ್ಕೈದು ತಿಂಗಳ ಹಿಂದೆ ಗಾಣಕಲ್ ಗ್ರಾಮದ ಕರುವೊಂದರ ಮೇಲೆ ಚಿರತೆ ದಾಳಿ ನಡೆದಿತ್ತು. ಹೀಗಾಗಿ ಇಲ್ಲಿನ ತೋಟವೊಂದರಲ್ಲಿ ಬೋನು ಇಡಲಾಗಿತ್ತು. ಇಂದಿನವರೆಗೆ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಅರಣ್ಯ ವ್ಯಾಪ್ತಿಯಲ್ಲೇ ಸಂಚರಿಸುತ್ತಿದ್ದ ಚಿರತೆ ಇದೀಗ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆತಂಕ ತಂದಿದೆ ಎಂದು ಸ್ಥಳೀಯರು ಹೇಳಿದರು.

ಮಾರ್ಗ ಬದಲಿಸಿದ ವಿದ್ಯಾರ್ಥಿಗಳು

ಚಿರತೆ ಭಯದಿಂದ ಜಟ್ಟಗರಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಎಂದಿನಂತೆ ಓಡಾಡುತ್ತಿದ್ದ ಶ್ರೀಧರ ಗುಡ್ಡದ ರಸ್ತೆಯನ್ನು ಬದಲಿಸಿ ಪಕ್ಕದ 100 ಅಡಿ ರಸ್ತೆಯನ್ನು ಅವಲಂಬಿಸಿದ್ದಾರೆ.

ಚಿನ್ಮಯ, ರಾಷ್ಟ್ರೋತ್ಥಾನ ಶಾಲೆಗೆ ಹೋಗುವ ಮಕ್ಕಳು ಕೂಡ ತಂಪಾಗಿದ್ದ ಅರಣ್ಯ ರಸ್ತೆಯನ್ನು ಬಿಟ್ಟು ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ವಾಯುವಿಹಾರ ಸ್ಥಗಿತ

ಶ್ರೀಧರಗುಡ್ಡ, ಸುಂಕೇನಹಳ್ಳಿ, ಕೋಡಿಪಾಳ್ಯ, ಕರಿಯನ ಪಾಳ್ಯ, ಹೆಮ್ಮಿಗೆಪುರ ಸೇರಿದಂತೆ ಹತ್ತಾರು ಬಡಾವಣೆಗಳ ನಾಗರಿಕರು ವಾಯುವಿಹಾರಕ್ಕಾಗಿ ತುರಹಳ್ಳಿ ಅರಣ್ಯ ವಲಯಕ್ಕೆ ಮುಂಜಾನೆಯೇ ಭೇಟಿ ನೀಡುತ್ತಿದ್ದರು. ಚಿರತೆ ಭಯದಿಂದ ಯಾರೊಬ್ಬರೂ ಕಾಡಿನ ವಲಯಕ್ಕೆ ಬರುತ್ತಿಲ್ಲ. ಭಯದಿಂದ ಬದುಕು ಸಾಗಿಸುವಂತಾಗಿದೆ ಎಂದು ಕೋಡಿಪಾಳ್ಯ ನಿವಾಸಿ ಶಾಂತರಾಜು ಆತಂಕ ವ್ಯಕ್ತಪಡಿಸಿದರು.

ಭಯದಲ್ಲಿ ನಂದಿಬೆಟ್ಟದ ತಪ್ಪಲಿನ ಗ್ರಾಮಸ್ಥರು

ದೊಡ್ಡಬಳ್ಳಾಪುರ: ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಚನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಚಿರತೆಯ ಹಾವಳಿ ಮಿತಿ ಮೀರಿದೆ. ಇದರಿಂದ ಈ ಗ್ರಾಮಗಳ ರೈತರು ತೋಟಗಳ ಕಡೆಗೆ ಹೋಗಲು ಹಾಗೂ ಬೆಟ್ಟದ ತಪ್ಪಲಿನಲ್ಲಿ ಹಸು, ಕುರಿ, ಮೇಕೆ ಮೇಯಿಸಲು ಭಯಪಡುವಂತಾಗಿದೆ.

ಮೂರು ದಿನಗಳ ಹಿಂದೆಯಷ್ಟೇ ಚನ್ನಾಪುರ ಗ್ರಾಮದ ಅಂಚಿನ ಕುರಿ ದೊಡ್ಡಿಗೆ ನುಗ್ಗಿದ್ದ ಚಿರತೆಯೊಂದು ಕುರಿಯನ್ನು ತಿಂದು ಹೋಗಿತ್ತು. ಇದರಿಂದಾಗಿ ಗ್ರಾಮದಲ್ಲಿ ಸಂಜೆ ವೇಳೆ ಜನರು ಹೊರಗೆ ಬರಲು ಸಹ ಆತಂಕಪಡುವಂತಾಗಿದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯು ಚನ್ನಾಪುರ ಸಮೀಪದ ನಂದಿಬೆಟ್ಟದ ತಪ್ಪಲಿನ ನೀಲಗಿರಿ ತೋಪಿನಲ್ಲಿ ಚಿರತೆ ಸೆರೆಗೆ ಬೋನು ಇಟ್ಟಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು, ಘಾಟಿ ಸುಬ್ರಮಣ್ಯ, ನೆಲಮಂಗಲ ತಾಲೂಕಿನ ದಾಬಸ್‌ಪೇಟೆ, ತ್ಯಾಮಗೊಂಡ್ಲು ಮತ್ತು ಹೊಸಕೋಟೆ ತಾಲೂಕಿನ ನಂದಗುಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.ಮೂರು ವರ್ಷದ ಹಿಂದೆ ಕೊಯಿರ ಬೆಟ್ಟದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿತ್ತು.

ನೆಲಮಂಗಲ ತಾಲ್ಲೂಕಿನಲ್ಲಿ ಈಗಾಗಲೇ ಎಂಟು ಬೋನು ಇಡಲಾಗಿದೆ. ಮತ್ತೆ ಮೂರು ಬೋನು ಖರೀದಿಸಲಾಗುತ್ತಿದೆ. ಈ ಹಿಂದೆ ಎರಡು ಚಿರತೆಗಳನ್ನು ಹಿಡಿದು ಬನ್ನೇರುಘಟ್ಟ ಹಾಗೂ ಕಾವೇರಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT