ಬೆಂಗಳೂರು: ನಟ ದರ್ಶನ್ ಅವರು ಕೊಲೆ ಆರೋಪದ ಮೇಲೆ ಜೈಲು ಸೇರಿದ್ದು ಈಗ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಸುದ್ದಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಜೈಲಿನಲ್ಲಿ ಆರೋಪಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಹೇಳುವಾಗ ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ರೇಖಾ ಶರ್ಮಾ, ನಟ ದರ್ಶನ್ ಅವರನ್ನು ಅತ್ಯಾಚಾರ ಆರೋಪಿ ಎಂದು ಸಂಬೋಧಿಸಿದ್ದಾರೆ.
ಜೈಲಿನಲ್ಲಿ ವಿಶೇಷ ಆತಿಥ್ಯ ನೀಡುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದ ಅವರು, ‘ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಅತ್ಯಾಚಾರ ಹಾಗೂ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ಕನ್ನಡ ನಟ ದರ್ಶನ್ ತೂಗೂದೀಪ ಅವರಿಗೆ ಜೈಲಿನಲ್ಲಿ ವಿಶೇಷ ಸೌಕರ್ಯ ನೀಡಲಾಗುತ್ತಿದೆ. ಇದಕ್ಕೆ ಏನು ಹೇಳುತ್ತಿರಾ? ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇಥ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಆದರೆ, ರೇಖಾ ಶರ್ಮಾ ಅವರು ದರ್ಶನ್ ಅವರನ್ನು ಅತ್ಯಾಚಾರ ಆರೋಪಿ ಎಂದು ಕರೆದಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿ ದರ್ಶನ್ ಅವರ ಮೇಲೆ ಅತ್ಯಾಚಾರ ಪ್ರಕರಣ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ದರ್ಶನ್ ಅಭಿಮಾನಿಗಳು ಈ ಬಗ್ಗೆ ಗರಂ ಆಗಿದ್ದಾರೆ.