‘25 ವರ್ಷದ ಅಭಿವೃದ್ಧಿಗೆ ಅಡಿಪಾಯ’

ಬೆಂಗಳೂರು: ‘ಕೇಂದ್ರ ಸರ್ಕಾರದ ‘ಅಮೃತಕಾಲ’ ಬಜೆಟ್ ಮುಂದಿನ 25 ವರ್ಷ ರಾಷ್ಟ್ರದ ಅಭಿವೃದ್ಧಿಗೆ ಅಡಿಪಾಯ ಆಗಲಿದೆ’ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹೇಳಿದರು.
ನಗರದಲ್ಲಿ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಅಮೃತಕಾಲ’ ಬಜೆಟ್ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಸೌಲಭ್ಯ ತಲುಪಿಸುವಂತೆ ಯೋಜನೆ ರೂಪಿಸಲಾಗಿದೆ. ₹ 10 ಲಕ್ಷ ಕೋಟಿಯನ್ನು ನೇರವಾಗಿ ಮೂಲಸೌಕರ್ಯಕ್ಕೆ ವಿನಿಯೋಗಕ್ಕೆ ಯೋಜನೆ ರೂಪಿಸಲಾಗಿದೆ. ಭಾರತವು ಸೂಪರ್ ಪವರ್ ದೇಶವಾಗಿ ಹೊರಹೊಮ್ಮುತ್ತಿದೆ. ರಫ್ತು ಪ್ರಮಾಣದಲ್ಲೂ ಮುಂಚೂಣಿಯಲ್ಲಿದೆ. ಮಾರ್ಚ್ ವೇಳೆಗೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ’ ಎಂದು ಬಣ್ಣಿಸಿದರು.
‘ವಿಶ್ವದಲ್ಲಿ ಭಾರತದ ಆರ್ಥಿಕತೆಯು ವೇಗವಾಗಿ ಮುನ್ನುಗ್ಗುತ್ತಿದೆ. ಆರ್ಥಿಕತೆಯಲ್ಲಿ 8ರಿಂದ 3ನೇ ಸ್ಥಾನಕ್ಕೆ ತಲುಪುತ್ತಿದ್ದೇವೆ’ ಎಂದು ಹೇಳಿದರು.
‘ಆಯವ್ಯಯ ಎಂದರೆ ಬರೀ ಭರವಸೆ, ಯೋಜನೆ ಪ್ರಕಟಣೆ ಅಲ್ಲ. ಅದು ಯೋಜನೆಗಳ ಅನುಷ್ಠಾನಕ್ಕಿರುವ ದಾರಿ. ಈ ವರ್ಷಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ, ಎಲ್ಲ ಸ್ಥರದ ಜನರ ಅಭಿವೃದ್ಧಿಗೆ ಅನುದಾನ ನೀಡಿ ದೇಶದಲ್ಲಿ ಬದಲಾವಣೆ ತರಲಾಗಿದೆ’ ಎಂದರು.
‘ಬಿಜೆಪಿ ಅಧಿಕಾರಕ್ಕೆ ಬಂದಾಗ ಶೇ 50ರಷ್ಟು ಜನರಿಗೆ ಶೌಚಾಲಯದ ಸೌಲಭ್ಯ ಇರಲಿಲ್ಲ. ದೇಶದಲ್ಲಿ 7 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶದ 3.50 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 10 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಈಗ ಶೇ 99ರಷ್ಟು ಮನೆಗಳಲ್ಲಿ ಗ್ಯಾಸ್ ಸಂಪರ್ಕವಿದೆ’ ಎಂದು ಹೇಳಿದರು.
‘ಪ್ರತಿಯೊಬ್ಬರೂ ಸ್ವಂತ ಸೂರು ಹೊಂದಬೇಕು ಎಂಬ ಉದ್ದೇಶದಿಂದ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ. ಹೆದ್ದಾರಿ ನಿರ್ಮಾಣ, ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಲಾಗುವುದು’ ಎಂದು ಹೇಳಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ‘ಬಜೆಟ್ ಗಾತ್ರವು ₹ 45 ಲಕ್ಷ ಕೋಟಿ ಆಗಿದ್ದು, ಸರ್ವ ಕ್ಷೇತ್ರಕ್ಕೂ ಸಮವಾದ ನ್ಯಾಯ ಕಲ್ಪಿಸಿದೆ. ದೇಶದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ. ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆಗೆ ಬರೀ ₹ 1 ಸಾವಿರ ಕೋಟಿ ನೀಡಲಾಗುತ್ತಿತ್ತು. ಬಿಜೆಪಿ ₹ 7,561 ಕೋಟಿ ನೀಡಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.