ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಬಂಧನ; ₹ 30 ಲಕ್ಷ ಮೌಲ್ಯದ ಆಭರಣ ಜಪ್ತಿ

Last Updated 11 ಡಿಸೆಂಬರ್ 2020, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಲ್ಲಿ ಕಳ್ಳತನ ಹಾಗೂ ಸರಗಳವು ಮಾಡುತ್ತಿದ್ದ ಆರೋಪದಡಿ ಮೂವರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದು, ಅವರಿಂದ ₹ 30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

‘ಹೆಬ್ಬಾಳದ ಶ್ರೀನಿವಾಸ್ ಅಲಿಯಾಸ್ ಅಪ್ಪು (42), ಹೆಣ್ಣೂರಿನ ತನ್ವೀರ್ (26) ಹಾಗೂ ಲಕ್ಷ್ಮಣ ಅಲಿಯಾಸ್ ಸೋನಿ (50) ಬಂಧಿತರು. ಮೂವರನ್ನು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಹಗಲಿನಲ್ಲಿ ಮನೆ ಗುರುತಿಸಿ ಕಳ್ಳತನ; ‘ಹಗಲಿನಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದ ಆರೋ‍ಪಿ ಶ್ರೀನಿವಾಸ್, ಕಸ ಬಿದ್ದಿರುತ್ತಿದ್ದ ಹಾಗೂ ರಂಗೋಲಿ ಇಲ್ಲದ ಮನೆಗಳನ್ನು ಗುರುತಿಸುತ್ತಿದ್ದರು. ನಂತರ ರಾತ್ರಿ ಮನೆ ಬಾಗಿಲು ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಶ್ರೀನಿವಾಸ್, ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಬಿಡುಗಡೆ ಹೊಂದಿದ್ದರು. ಡಿ. 3ರಂದು ಎಂ.ಇ.ಎಸ್ ರಸ್ತೆಯಲ್ಲಿರುವ ಮೋಹಿತ್ ಚಿನ್ನಾಭರಣ ಮಳಿಗೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಆರೋಪಿ ಬಳಿ ಚಿನ್ನದ ಸರ ಸಿಕ್ಕಿತ್ತು. ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗಲೇ, ಮನೆಯೊಂದರಲ್ಲಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು’ ಎಂದೂ ಹೇಳಿದರು.

‘ಜ್ಞಾನಭಾರತಿ, ಮಹಾಲಕ್ಷ್ಮೀ ಲೇಔಟ್‌ ಹಾಗೂ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯ ಕೆಲ ಮನೆಗಳಲ್ಲಿ ಆರೋಪಿ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ವಿವರಿಸಿದರು.

ಸರಗಳವು; ‘ಆರೋಪಿ ತನ್ವೀರ್, ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತೊಯ್ದಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಸೇರಿ ಕೆಲ ಪುರಾವೆ ಆಧರಿಸಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇನ್ನೊಬ್ಬ ಆರೋಪಿ ಲಕ್ಷ್ಮಣ, ರಾಜಾಜಿನಗರದಲ್ಲಿರುವ ಯುನೈಟೆಡ್ ಇಂಡಿಯಾ ವಿಮೆ ಕಂಪನಿ ಕಚೇರಿಗೆ ನುಗ್ಗಿ ಅಲ್ಮೇರಾ ಒಡೆದು ₹ 6.36 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 50 ಸಾವಿರ ನಗದು ಕಳ್ಳತನ ಮಾಡಿದ್ದರು’ ಎಂದೂ ತಿಳಿಸಿದರು.

ಗ್ರಾಹಕರ ಸೋಗಿನಲ್ಲಿ ವಂಚನೆ

ಗ್ರಾಹಕರ ಸೋಗಿನಲ್ಲಿ ಚಿನ್ನ ಹಾಗೂ ಡೈಮಂಡ್ ಹರಳುಗಳಿದ್ದ ಆಭರಣ ಖರೀದಿಸಿ ಹಣ ನೀಡದೇ ವಂಚಿಸಿ ಪರಾರಿಯಾಗಿದ್ದ ಆರೋಪಿ ಶಾಕೀಜ್ ಅಹಮ್ಮದ್ ಖಾನ್ ಅಲಿ ಯಾಸ್ ಇಮ್ರಾನ್ (27) ಎಂಬುವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಮನಗರ ಜಿಲ್ಲೆಯ ಬಿಡದಿ ಕೇತಗಾನಹಳ್ಳಿ ನಿವಾಸಿ ಶಾಕೀಜ್, ಇತ್ತೀಚೆಗೆ ಆಭರಣ ಸಮೇತ ಪರಾರಿಯಾಗಿದ್ದರು. ಅವರ ವಿರುದ್ಧ ‘ಹೈಯಗ್ರಿವಾ’ ಆಭರಣ ಮಳಿಗೆ ಮಾಲೀಕ ಬಾಲಾಜಿ ದೂರು ನೀಡಿದ್ದರು. ಆರೋಪಿಯಿಂದ ₹ 10 ಲಕ್ಷ ಮೌಲ್ಯದ ಆಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಚಿನ್ನ ಹಾಗೂ ಡೈಮಂಡ್ ಹರಳುಗಳಿದ್ದ ಆಭರಣ ಕಾಯ್ದಿರಿಸಿದ್ದ ಆರೋಪಿ, ಅದನ್ನು ತಮ್ಮ ಮನೆ ಬಳಿ ತಂದುಕೊಡುವಂತೆ ಮಳಿಗೆ ಮಾಲೀ ಕರಿಗೆ ಹೇಳಿದ್ದರು. ಅದರಂತೆ ಮಳಿಗೆ ಕೆಲಸಗಾರರೊಬ್ಬರು, ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ಆಭರಣ ತೆಗೆದುಕೊಂಡು ಹೋಗಿದ್ದರು. ಅವರಿಂದ ಆಭರಣ ಪಡೆದಿದ್ದ ಆರೋಪಿ, ಹಣ ಕೊಟ್ಟಿರಲಿಲ್ಲ. ಮನೆಗೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT