ಮಂಗಳವಾರ, ನವೆಂಬರ್ 19, 2019
28 °C
ವಿಚ್ಛೇದಿತ ಪತ್ನಿಯ ತಾಯಿ ಕೊಟ್ಟ ದೂರಿನಿಂದ ಆರೋಪಿಯ ಬಣ್ಣ ಬಯಲು

ನಾಲ್ವರಿಗೆ ತಾಳಿ ಕಟ್ಟಿದವ ಜೈಲು ಪಾಲು!

Published:
Updated:
Prajavani

ಬೆಂಗಳೂರು: ಹಲವು ಹೆಸರುಗಳನ್ನು ಇಟ್ಟುಕೊಂಡು ಒಬ್ಬರ ವಿಷಯ ಮತ್ತೊಬ್ಬರಿಗೆ ಗೊತ್ತಾಗದಂತೆ ನಾಲ್ವರು ಮಹಿಳೆಯರನ್ನು ವಿವಾಹವಾಗಿ, ಎಲ್ಲರಿಗೂ ಮೋಸ ಮಾಡಿರುವ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮೈಸೂರಿನ ಸರಸ್ವತಿಪುರ ನಿವಾಸಿ ಎನ್.ಆರ್. ಗಣೇಶ್ ಅಲಿಯಾಸ್ ವಿಕ್ರಂ ಅಲಿಯಾಸ್ ಕಾರ್ತಿಕ್ ಅಲಿಯಾಸ್ ಹರೀಶ್‍ ಕುಮಾರ್ (45) ಬಂಧಿತ ಆರೋಪಿ. ಮೂರನೇ ವಿಚ್ಛೇದಿತ ಪತ್ನಿಯ ತಾಯಿ ಕೊಟ್ಟ ದೂರಿನ ಮೇರೆಗೆ ಆರೋಪಿಯ ಬಣ್ಣ ಬಯಲಾಗಿದೆ.

ವಿಧವೆಯರು, ಅಸಹಾಯಕ ಹೆಣ್ಣುಮಕ್ಕಳು, ವಯೋವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಬ್ಯಾಂಕಿನಲ್ಲಿ ಸಾಲ ಕೊಡಿಸುವ, ನಿವೇಶನ, ಫ್ಲ್ಯಾಟ್‍ ಬಾಡಿಗೆ ಹಾಗೂ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿರುವ ವಿಷಯ ತನಿಖೆಯಿಂದ ಗೊತ್ತಾಗಿದೆ. 10ನೇ ತರಗತಿ ಓದಿರುವ ಗಣೇಶನ ಮೋಸದ ಬಲೆಗೆ ಸಾಫ್ಟ್‌ವೇರ್ ಎಂಜಿನಿಯರ್‌ ಮಹಿಳೆಯೂ ಬಿದ್ದಿರುವುದು ವಿಶೇಷ!

ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಜಾಜಿನಗರದ ಯುವತಿಯನ್ನು 15 ವರ್ಷಗಳ ಹಿಂದೆ ಗಣೇಶ್ ಮೊದಲು ಮದುವೆಯಾಗಿದ್ದ. ಆಕೆಗೆ 14 ವರ್ಷದ ಪುತ್ರ ಇದ್ದಾನೆ. ಮೊದಲ ಪತ್ನಿಗೆ ಗೊತ್ತಾಗದಂತೆ, ಮೈಸೂರಿನಲ್ಲಿ ನೆಲೆಸಿರುವ ಮಡಿಕೇರಿಯ ಯುವತಿಯನ್ನು ಏಳು ವರ್ಷಗಳ ಹಿಂದೆ ಆತ ಎರಡನೇ ಮದುವೆಯಾಗಿದ್ದ. ಆಕೆಗೆ ಒಂದೂವರೆ ವ‌ರ್ಷದ ಮಗು ಇದೆ.

ಬಳಿಕ ‘ಬ್ರಾಹ್ಮಿ’ ಮ್ಯಾಟ್ರಿಮೋನಿಯಲ್‍ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡು ಅಮಾಯಕ ಹೆಣ್ಣುಮಕ್ಕಳಿಗೆ ಹುಡುಕಾಟ ನಡೆಸಿದ್ದಾನೆ. ಇದೇ ಮ್ಯಾಟ್ರಿಮೋನಿಯಲ್ ಮೂಲಕ ವಿಧವೆ, ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರನ್ನು 2018ರಲ್ಲಿ ಪರಿಚಯಿಸಿಕೊಂಡಿದ್ದ. ವಿವಾಹವಾಗಿ ಅಮೆರಿಕದಲ್ಲಿ ನೆಲೆಸಿದ್ದ ವೇಳೆ ಅಲ್ಲಿ ನಡೆದ ಕಾರು ಅಪಘಾತದಲ್ಲಿ ಆಕೆಯ ಮೊದಲ ಪತಿ ಸ್ಥಳದಲ್ಲಿಯೇ ಅಸುನೀಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ಆಕೆ, ಅಂಗವಿಕಲರಾಗಿದ್ದಾರೆ. ಮತ್ತೆ ಬದುಕು ಕಟ್ಟಿಕೊಡುತ್ತೇನೆ ಎಂದು ನಂಬಿಸಿ ಆಕೆಯನ್ನು ಗಣೇಶ ಮೂರನೇ ಮದುವೆ ಆಗಿದ್ದಾನೆ. 2019ರಲ್ಲಿ ಹೊಸಕೋಟೆಯ ಮಹಿಳೆಯನ್ನು ಪರಿಚಯಿಸಿಕೊಂಡು ನಾಲ್ಕನೇ ಮದುವೆಯಾಗಿದ್ದಾನೆ.

‘ಮೂರನೇ ವಿಚ್ಛೇದಿತ ಪತ್ನಿಯ ಸಂಬಂಧಿ ಮಹಿಳೆಯೊಬ್ಬರ ನಿವೇಶನ ಮಾರಾಟ ಮಾಡಿಕೊಡುವುದಾಗಿ ತನ್ನ ಹೆಸರಿಗೆ ಜಿಪಿಎ ಮಾಡಿಸಿಕೊಂಡು₹ 25 ಲಕ್ಷ ವಂಚನೆ ಮಾಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈತ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದೇ ರೀತಿಯ ಜೀವನ ಕಳೆಯುತ್ತಿದ್ದ. ಮೊದಲ ಮತ್ತು ಎರಡನೇ ಪತ್ನಿಯರಿಂದ ಹೇಳಿಕೆ ಪಡೆಯಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಗಣೇಶನ ಬಗ್ಗೆ ಅನುಮಾನಗೊಂಡಿದ್ದ ಮೂರನೇ ವಿಚ್ಛೇದಿತ ಪತ್ನಿಯ ತಾಯಿ, ಆತನ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದರು. ವಿಚಾರಿಸಿದಾಗ ಈತ ಇತರ ನಾಲ್ವರನ್ನು ಮದುವೆಯಾಗಿರುವುದು ಗೊತ್ತಾಗಿದೆ. ತಕ್ಷಣ ಯಶವಂತಪುರದ ಆರ್‌ಎಂಸಿ ಯಾರ್ಡ್ ಪೊಲೀಸ್‌ ಠಾಣೆಗೆ ತಿಳಿಸಿದ್ದಾರೆ. ಈತನಿಂದ ವಂಚನೆಗೊಳಗಾದವರು ಸಂಪರ್ಕಿಸುವಂತೆ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ವಿನಂತಿಸಿದ್ದಾರೆ.

‘ಬ್ರಾಹ್ಮಿ’ಯಿಂದ ಸಿಕ್ಕಿಬಿದ್ದ!

ಸಾಫ್ಟ್‌ವೇರ್‌ ಎಂಜಿನಿಯರ್‌ ಮಹಿಳೆಯ ತಾಯಿ ‘ಬ್ರಾಹ್ಮಿ’ ಮ್ಯಾಟ್ರಿಮೋನಿಯಲ್‌ಅನ್ನು ಜಾಲಾಡಿದಾಗ ಗಣೇಶನ ಬಣ್ಣ ಬಯಲಾಗಿದೆ. ಸ್ಟೇಟಸ್‌ನಲ್ಲಿ ವಿಕ್ರಂ, ಕಾರ್ತಿಕ್ ಮತ್ತು ಹರೀಶ್ ಸೇರಿದಂತೆ ವಿವಿಧ ಹೆಸರುಗಳಲ್ಲಿ ಆರೋಪಿ ತನ್ನನ್ನು ಪರಿಚಯಿಸಿಕೊಂಡಿದ್ದ. ಹೀಗಾಗಿ, ಆರ್‌ಎಂಸಿ ಯಾರ್ಡ್ ಠಾಣೆಗೆ ಅವರು ದೂರು ನೀಡಿದ್ದರು.

ಪ್ರತಿಕ್ರಿಯಿಸಿ (+)