ಬೆಂಗಳೂರು: ಖಾಸಗಿ ಕಂಪನಿ ನೌಕರನೊಬ್ಬ ಬ್ಯಾಂಕ್‌ಗೆ ಹಣ ಪಾವತಿಸುವ ನೆಪದಲ್ಲಿ ಸುಳ್ಳು ಕಥೆ ಕಟ್ಟಿ ₹2.57 ಕೋಟಿ ಹಣದೊಂದಿಗೆ ಪರಾರಿಯಾಗಿದ್ದು, ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮನ್ ಎಂಬಾತ ಹಣದ ಜೊತೆಗೆ ಪರಾರಿ ಆಗಿರುವ ಆರೋಪಿ.
‘ಸುಮನ್, ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ನಿಗದಿತ ಬ್ಯಾಂಕ್‌ಗಳಿಗೆ ಪಾವತಿಸುವ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ‘ಹಿಟಾಚಿ ಕ್ಯಾಶ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್’ ಕಂಪನಿ ಮಾಲೀಕ ಮಲ್ಲಿಕಾರ್ಜುನ್ ದೂರು ನೀಡಿದ್ದು ಆರೋಪಿ ಪತ್ತೆಗೆ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮಲ್ಲಿಕಾರ್ಜುನ್ ಅವರು ಕಂಪನಿ ಹೊಂದಿದ್ದು ಈ ಕಂಪನಿ ಜತೆಗೆ ನೋಂದಣಿ ಮಾಡಿಕೊಂಡ ಗ್ರಾಹಕರಿಂದ ಹಣವನ್ನು ಸ್ವೀಕರಿಸಿ ನಿಗದಿತ ಬ್ಯಾಂಕ್‌ಗಳಿಗೆ ಪಾವತಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ಪಡೆದಿದ್ದಾರೆ. ನಗರದ ಮಾರ್ಗ ಸಂಖ್ಯೆ ಬಿಎಲ್‌ಆರ್ 15ರಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಲು ಕಂಪನಿ ನೌಕರ ಸುಮನ್ ಎಂಬಾತನನ್ನು ಕಸ್ಟೋಡಿಯನ್, ಬೋಲನಾಥದಾಸ್‌ನನ್ನು ಗಾರ್ಡ್ ಹಾಗೂ ಫಜಲ್ ಹುಸೇನ್ ಎಂಬಾತನನ್ನು ಚಾಲಕನಾಗಿ ನೇಮಕ ಮಾಡಿಕೊಂಡಿದ್ದರು’
‘ಗ್ರಾಹಕರಿಂದ ₹ 2.84 ಕೋಟಿ ಹಣವನ್ನು ಆರೋಪಿ ಸಂಗ್ರಹಿಸಿದ್ದ. ಆ ಪೈಕಿ ₹23.10 ಲಕ್ಷ ಹಣವನ್ನು ರಿಚ್‌ಮಂಡ್ ವೃತ್ತದ ಬಳಿಯ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದ. ದೊಮ್ಮಲೂರಿನ ಕಚೇರಿಗೆ ₹4.35 ಲಕ್ಷ ಜಮೆ ಮಾಡಿದ್ದ. ಉಳಿದ ₹ 2.57 ಕೋಟಿ ಹಣವನ್ನು ಸೇಂಟ್ ಮಾರ್ಕ್ಸ್ ರಸ್ತೆಯ ಫೆಡರಲ್ ಬ್ಯಾಂಕ್‌ಗೆ ಜಮೆ ಮಾಡಬೇಕಿತ್ತು. ಆದರೆ, ಆ ಬ್ಯಾಂಕ್‌ಗೆ ಹಣ ಜಮೆ ಮಾಡದೇ ಸುಳ್ಳು ಹೇಳಿ ಪರಾರಿಯಾಗಿದ್ದಾನೆ’ ಎಂದು ಮೂಲಗಳು ಹೇಳಿವೆ.
ಕಥೆ ಕಟ್ಟಿದ ಆರೋಪಿ: ‘ಹಣದೊಂದಿಗೆ ಬ್ಯಾಂಕ್ ಬಳಿಗೆ ಬಂದಿದ್ದ ಆರೋಪಿ, ಸಿಬ್ಬಂದಿಗಳಾದ ಬೀಲನಾಥದಾಸ್ ಹಾಗೂ ಚಾಲಕ ಫಜಲ್ ಹುಸೇನ್ ಅವರನ್ನು ಹೊರಗೆ ನಿಲ್ಲಿಸಿ ಬ್ಯಾಂಕ್ ಪ್ರವೇಶಿಸಿದ್ದ. ಸ್ವಲ್ಪ ಸಮಯದ ನಂತರ ಬೋಲನಾಥ್‌ಗೆ ಕರೆ ಮಾಡಿ, ‘ನನ್ನ ಕುಟುಂಬದ ಸದಸ್ಯರೊಬ್ಬರು ಮೃಪಟ್ಟಿದ್ದಾರೆ. ನಾನು ಬ್ಯಾಂಕ್‌ಗೆ ಹಣ ಪಾವತಿಸಿ ಮನೆಗೆ ತೆರಳುತ್ತೇನೆ. ಕಂಪನಿಗೆ ಕರೆ ಮಾಡಿ ಮಾಹಿತಿ ನೀಡಿರುವೆ. ನೀವು ವಾಹನ ತೆಗೆದುಕೊಂಡು ಕಂಪನಿಗೆ ತೆರಳಿ’ ಎಂದು ತಿಳಿಸಿದ್ದ. ಇದನ್ನು ನಂಬಿದ್ದ ಇಬ್ಬರು ತೆರಳಿದ್ದರು. ಕಚೇರಿಯಲ್ಲಿ ವಿಚಾರಿಸಿದಾಗ ಸುಮನ್ ಸುಳ್ಳು ಹೇಳಿ ಪರಾರಿ ಆಗಿರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.