ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಬೇರೆಡೆಗೆ ಸೆಳೆದು ₹ 2.50 ಲಕ್ಷ ದೋಚಿ ಪರಾರಿ

Last Updated 20 ನವೆಂಬರ್ 2019, 5:14 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ಯುವಕನ ಗಮನವನ್ನು ಇಬ್ಬರು ದುಷ್ಕರ್ಮಿಗಳು ಬೇರೆಡೆ ಸೆಳೆದು ₹ 2.50 ಲಕ್ಷ ದೋಚಿ ಪರಾರಿಯಾದ ಘಟನೆ ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಉತ್ತಮ್ ಸಾಗರ್ ಹೋಟೆಲ್ ಬಳಿ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆದಿದೆ.

ಅಮಲ್ ವಿನ್ಸೆಂಟ್ (22) ಹಣ ಕಳೆದುಕೊಂಡ ಯುವಕ. ಅಮಲ್ ವಿನ್ಸೆಂಟ್ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಮೂರ್ತಿನಗರದ ಕಲ್ಕೆರೆ ಬಳಿ ಇರುವ ಅಪೆರಲ್ಸ್ ಗಾರ್ಮೆಂಟ್ಸ್‌ನಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಅಮಲ್‌ ಮಾಡುತ್ತಿದ್ದಾರೆ. ನೌಕರರಿಗೆ ವೇತನ ಕೊಡಲು ಗಾರ್ಮೆಂಟ್ಸ್‌ ಮಾಲೀಕ ಜೈಸಾನ್ ಆಂಥೋನಿ ಅವರು ಬ್ಯಾಂಕ್‌ನಿಂದ ಹಣ ತರುವಂತೆ ಚೆಕ್ ಕೊಟ್ಟು ಕಳುಹಿಸಿದ್ದರು.

ನ. 18ರಂದು ಮಧ್ಯಾಹ್ನ ಬಾಣಸವಾಡಿಯ ಮುಖ್ಯರಸ್ತೆಯಲ್ಲಿರುವ ಉತ್ತಮ್ ಸಾಗರ್ ಹೋಟೆಲ್ ಬಳಿಯ ಸಿಂಡಿಕೇಟ್ ಬ್ಯಾಂಕಿನಿಂದ ₹ 2.50 ಲಕ್ಷ ಡ್ರಾ ಮಾಡಿ, ಹಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೊರಬಂದಿದ್ದರು. ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ, ‘ನಿಮ್ಮ ಶರ್ಟ್‌ನ ಬೆನ್ನಿನ ಭಾಗದಲ್ಲಿ ಕಲೆ ಇದೆ’ ಎಂದು ಹೇಳಿದ್ದ. ಬಳಿಕ ಅದನ್ನು ತೊಳೆದುಕೊಳ್ಳುವಂತೆ ನೀರಿನ ಬಾಟಲಿ ನೀಡಿದ್ದ.

ಆತನ ಮಾತು ನಂಬಿ ಕೈಯಲ್ಲಿದ್ದ ಹಣವಿದ್ದ ಬ್ಯಾಗ್ ಅನ್ನು ಸ್ಕೂಟರ್ ಮೇಲಿಟ್ಟು, ಕಲೆ ತೊಳೆದುಕೊಳ್ಳಲು ಅಮಲ್‌ ಮುಂದಾಗಿದ್ದಾರೆ. ಆಗ ಹಣ ಇದ್ದ ಬ್ಯಾಗ್ ಸಮೇತ ಅಪರಿಚಿತ ವ್ಯಕ್ತಿ, ಸಮೀಪದಲ್ಲೇ ಪಲ್ಸರ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಇನ್ನೊಬ್ಬ ವ್ಯಕ್ತಿಯ ಜತೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಘಟನೆ ನಡೆದ ಸ್ಥಳದ ರಸ್ತೆಬದಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಅದರಲ್ಲಿ ಸೆರೆಯಾಗಿರುವ ವ್ಯಕ್ತಿಗಳ ಚಹರೆ ಆಧರಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT