ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಸ’ಕ್ಕೆ ಕ್ರೀಡೆ ವೇದಿಕೆ

ಹಾನಗಲ್‌ ಟ್ರೀ ಪಾರ್ಕ್‌ನಲ್ಲಿ ವಯಸ್ಕರಿಗೂ ಮನರಂಜನೆ
Last Updated 20 ಮೇ 2018, 13:51 IST
ಅಕ್ಷರ ಗಾತ್ರ

ಹಾನಗಲ್‌ದ ಕುಮಾರೇಶ್ವರ ಸಸ್ಯೋದ್ಯಾನದಲ್ಲಿ ಹೊಸದಾಗಿ ಅಳವಡಿಸಿರುವ ಮರದ ಸಾಹಸ ಕ್ರೀಡಾ ಸಾಮಗ್ರಿಗಳು ಜನರನ್ನು ಆಕರ್ಷಿಸುತ್ತಿವೆ.

ಒಂದು ವರ್ಷದ ಹಿಂದೆ ಆರಂಭಗೊಂಡಿರುವ ಟ್ರೀ ಪಾರ್ಕ್‌ಗೆ ಮರದ ಆಟಿಕೆಗಳು ಹೊಸತನ ನೀಡಿವೆ. ಇಲ್ಲಿರುವ ಮಕ್ಕಳ ಆಟದ ಜಾರುಗುಂಡಿ, ಜೋಕಾಲಿ ಮತ್ತಿತರ ಆಟಿಕೆಗಳು ಚಿಣ್ಣರಿಗೆ ಮಾತ್ರ ಮುದ ನೀಡುತ್ತಿದ್ದವು. ಮಕ್ಕಳ ಆಟ ನೋಡಿಕೊಂಡು ಇರಬೇಕಿದ್ದ ಪಾಲಕರಿಗೂ ಈಗ ಆಟ, ಮನರಂಜನೆಯಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ.

ಮರದ ತುಂಡುಗಳು, ನೈಲಾನ್‌ ಹಗ್ಗ ಮತ್ತು ನಟ್‌–ಬೋಲ್ಟ್‌ ಬಳಿಸಿ ಸಿದ್ಧಗೊಳಿಸಿರುವ 13 ವಿಧದ ಸಾಹಸ ಚಟುವಟಿಕೆಯ ಆಟಿಕೆಗಳು ಇಲ್ಲಿ ಲಭ್ಯ ಇವೆ. ದುಂಡಸಿ ಗ್ರಾಮದ ಬಾಪು ಬಡಿಗೇರ ಎಂಬುವವರು ಈ ಆಟಿಕೆಗಳನ್ನು ನಿರ್ಮಿಸಿದ್ದಾರೆ.

ಸ್ವಿಂಗ್‌, ಸೀಸಾ, ರಿಂಗ್‌ವಾಕ್‌, ಪ್ಲೇಟ್‌ವಾಕ್‌, ಉಡನ್‌ ಚೇರ್ಸ್‌, ಸ್ಟಿಕ್‌ ವಾಕ್‌ ಮತ್ತು ಮರದ ಜೋಕಾಲಿ, ಜಗ್ಗು–ಬಗ್ಗು ಆಟಗಳು ವಯಸ್ಕರಿಗೆ, ಸಾಹಸ ಪ್ರವೃತ್ತಿಯರಿಗೆ ಮುದ ನೀಡುತ್ತಿವೆ. ಸಾಹಸಮಯ ಆಟಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಯುವಕರಿಗೂ ಇಲ್ಲಿ ಬರವಿಲ್ಲ.

ಟ್ರೀ ಪಾರ್ಕ್‌ ಜವಾಬ್ದಾರಿ ಹೊತ್ತಿರುವ ವಲಯ ಅರಣ್ಯಾಧಿಕಾರಿ ಎಸ್‌.ಶಿವರಾತ್ರೇಶ್ವರಸ್ವಾಮಿ, ‘ಮಕ್ಕಳೊಂದಿಗೆ ಇಲ್ಲಿಗೆ ಬರುವ ಪಾಲಕರು ಮಕ್ಕಳಾಟಿಕೆ ಬಳಸಬಾರದು ಎಂಬ ಉದ್ದೇಶದಿಂದ ವಯಸ್ಕರಿಗಾಗಿ ಪ್ರತ್ಯೇಕ ಆಟಿಕೆ ಸಿದ್ಧಗೊಳಿಸಲಾಗಿದೆ. ಸುಮಾರು ₹ 2 ಲಕ್ಷ ಮೊತ್ತದಲ್ಲಿ ಈ ಆಟಿಕೆಗಳನ್ನು ತಯಾರಿಸಲಾಗಿದೆ’ ಎಂದರು.

‘ಟ್ರೀ ಪಾರ್ಕ್‌ನಲ್ಲಿ ಮಕ್ಕಳು ಆಟ ಆಡುವ ತನಕ ಸಮಯ ಕಳೆಯಲು ಮೊದಲು ಆಗುತ್ತಿದ್ದ ಕಿರಿಕಿರಿ ಈಗಿಲ್ಲ, ನಮ್ಮಿಷ್ಟದ ಆಟಗಳನ್ನು ಆಡಿ ಆಲಸ್ಯದ ದಣಿವು ನೀಗಿಸಿಕೊಳ್ಳುತ್ತೇವೆ. ಈಗ ಮಕ್ಕಳೊಂದಿಗೆ ನಮಗೂ ಮನರಂಜನೆ ಸಿಗುತ್ತಿದೆ’ ಎಂದು ಇಲ್ಲಿನ ನಿವಾಸಿ ರವಿಬಾಬು ಪೂಜಾರ ಹೇಳುತ್ತಾರೆ.

ಪ್ರತ್ಯೇಕ ಗ್ಯಾಲರಿ ಮಾಡಿಕೊಂಡು ಚಿಣ್ಣರಿಗೆ ಹಾಗೂ ದೊಡ್ಡವರಿಗೆ ಮನರಂಜನೆಯ ಆಟಿಕೆಗಳ ಪ್ರವೇಶಾವಕಾಶ ಮಾಡುವ ವ್ಯವಸ್ಥೆ ಮಾಡಲಾಗಿದೆ, ನೆಲಕ್ಕೆ ಮರಳು ಹಾಕಿ ಅಪಾಯ ಆಗದಂತೆ ಎಚ್ಚರ ವಹಿಸಲಾಗಿದೆ. ಟ್ರೀ ಪಾರ್ಕ್‌ನ ಎರಡು ಭಾಗದಲ್ಲಿ ವೀಕ್ಷಣಾ ಗೋಪುರ ನಿರ್ಮಾಣಗೊಂಡಿದ್ದು, ಕಾಡಿನ ಸೊಬಗು ಸವಿಯಲು ಸಾಧ್ಯ ಆಗಿದೆ. ವಿಶ್ರಾಂತಿ ಪಡೆಯಲು, ಉಪಾಹಾರ ಸವಿಯಲು ಎರಡು ಪ್ಯಾರಾ ಗೋಲಾಗಳ್ನನು ನಿರ್ಮಿಸಲಾಗಿದೆ.

ಮಾರುತಿ ಪೇಟಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT