ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ರೀಲ್ಸ್‌’ ವೀಕ್ಷಿಸಿ ಸ್ನೇಹ | ಮಹಿಳೆಗೆ ವಂಚನೆ; ಕ್ಯಾಬ್‌ ಚಾಲಕನ ವಿರುದ್ಧ ದೂರು

Published 10 ಆಗಸ್ಟ್ 2024, 16:24 IST
Last Updated 10 ಆಗಸ್ಟ್ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ವಿವಾಹಿತ ಮಹಿಳೆಯನ್ನು ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದ ಆರೋಪದಡಿ ಕ್ಯಾಬ್‌ ಚಾಲಕನ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.  

ಕೆಂಗೇರಿ ನಿವಾಸಿ ಕ್ಯಾಬ್ ಚಾಲಕ ಪ್ರಜ್ವಲ್(28) ವಿರುದ್ಧ ದೂರು ದಾಖಲಾಗಿದೆ. ಚಿತ್ರದುರ್ಗದ ಮಹಿಳೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

‘ಮಹಿಳೆಯ ಪತಿ ಮದ್ಯ ಸೇವಿಸಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮಹಿಳೆ ಬೇಸತ್ತು ಪತಿಯನ್ನು ತೊರೆದು ಮಕ್ಕಳ ಜತೆಗೆ ತವರು ಸೇರಿದ್ದರು. ನಂತರ, ಮಗನನ್ನು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ಗೆ ಸೇರಿಸಿ, ಮಗಳನ್ನು ತವರು ಮನೆಯಲ್ಲಿಯೇ ಬಿಟ್ಟಿದ್ದರು. ಒಂದು ವರ್ಷದಿಂದ ಕೆಂಗೇರಿ ಸಮೀಪದ ಹರ್ಷ ಲೇಔಟ್‌ನಲ್ಲಿ ಸ್ನೇಹಿತೆಯರ ಜತೆ ವಾಸವಾಗಿದ್ದು, ಜೀವನೋಪಾಯಕ್ಕಾಗಿ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ, ‘ರೀಲ್ಸ್‌’ ಮಾಡುವ ಹವ್ಯಾಸವಿತ್ತು. ಈಕೆಯ ‘ರೀಲ್ಸ್’ ನೋಡುತ್ತಿದ್ದ ಮಂಡ್ಯದ ಕ್ಯಾಬ್ ಚಾಲಕ ಲೈಕ್‌, ಕಮೆಂಟ್ ಮಾಡುತ್ತಿದ್ದ. ನಂತರ, ಇವರಿಬ್ಬರೂ ಪರಿಚಯವಾಗಿ ಮೊಬೈಲ್ ನಂಬರ್ ಪಡೆದು ಆಗಾಗ್ಗೆ ಪರಸ್ಪರ ಚಾಟಿಂಗ್ ಮಾಡುತ್ತಿದ್ದರು’ ಎನ್ನಲಾಗಿದೆ.

ಅದಾದ ಮೇಲೆ ಇಬ್ಬರ ನಡುವೆ ಸಲುಗೆ ಬೆಳೆದು ಆಗಾಗ್ಗೆ ಮಾತುಕತೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ‘ಮಹಿಳೆ ತನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿಕೊಂಡಿದ್ದರು. ಆದರೂ ತೊಂದರೆ ಇಲ್ಲ. ತಮಗೆ ಬಾಳು ಕೊಡುವುದಾಗಿ ಕ್ಯಾಬ್ ಚಾಲಕ ಹೇಳಿದ್ದ’ ಎನ್ನಲಾಗಿದೆ. ಕ್ಯಾಬ್ ಚಾಲಕ ಮಹಿಳೆ ಜತೆ ಸಹ ಜೀವ ನಡೆಸುತ್ತಿದ್ದ. ಇದೀಗ ಆತ ಬಿಟ್ಟು ಹೋಗಿ, ತನಗೆ ಮೋಸ ಮಾಡಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ಪೊಲೀಸರು ಕ್ಯಾಬ್ ಚಾಲಕನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

‘ಮಹಿಳೆ ನನಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಸಿದ್ದಾರೆ. ಪತಿಗೆ ವಿಚ್ಛೇದನ ನೀಡಿ ಬರುವಂತೆ ಹೇಳಿದ್ದೆ. ಅದಕ್ಕೆ ಕೋಪಗೊಂಡು ಆಕೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಠಾಣೆಗೆ ದೂರು ನೀಡಿದ್ದಾರೆ. ಈಗಲೂ ಆಕೆಯನ್ನು ಮದುವೆ ಆಗಲು ಸಿದ್ಧ ಇರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT