ಬಿಬಿಎಂಪಿ ಕಾಮಗಾರಿ ವಿಳಂಬದಿಂದ ನೊರೆ ಸೃಷ್ಟಿ

7
ಬೆಳ್ಳಂದೂರು ಕೆರೆ: ಪಾಲಿಕೆಗೆ ‌ಪತ್ರ ಬರೆದ ಬಿಡಿಎ

ಬಿಬಿಎಂಪಿ ಕಾಮಗಾರಿ ವಿಳಂಬದಿಂದ ನೊರೆ ಸೃಷ್ಟಿ

Published:
Updated:

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಭಾರಿ ಮಳೆ ಸುರಿದಾಗ ಬೆಳ್ಳಂದೂರು ಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳಲು ಯಮಲೂರು ಭಾಗದ ಕೋಡಿ ಬಳಿ ಬಿಬಿಎಂಪಿ ನಡೆಸುತ್ತಿರುವ ನಾಲಾ ಕಾಮಗಾರಿ ಪೂರ್ಣಗೊಳ್ಳದಿರುವುದೇ ಕಾರಣ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆರೋಪಿಸಿದೆ.

’ಕಾಮಗಾರಿ ವಿಳಂಬದಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಅವರು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ನೊರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಾಗೂ ಪ್ರವಾಹ ತಡೆಯುವ ಸಲುವಾಗಿ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ  ಬಿಬಿಎಂಪಿ ಹಾಗೂ ಬಿಡಿಎ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಪ್ರಮಾಣಪತ್ರ ಸಲ್ಲಿಸಿವೆ. ಅದರ ಪ್ರಕಾರ ಬಿಬಿಎಂಪಿ ಯಮಲೂರು ಹಾಗೂ ಬೆಳ್ಳಂದೂರು ಕೋಡಿಗಳ ಬಳಿ ನಾಲೆಗಳ ಎರಡೂ ಬದುಗಳನ್ನು ಬಲಪಡಿಸುತ್ತಿದೆ.

ಬಿಬಿಎಂಪಿ ಆಯುಕ್ತರಿಗೆ ಇತ್ತೀಚೆಗೆ ಪತ್ರ ಬರೆದಿರುವ ಬಿಡಿಎ ಆಯುಕ್ತರು, ‘ನಾಲೆ ಅಭಿವೃದ್ಧಿ ಕಾಮಗಾರಿಗಳನ್ನು ಬಿಬಿಎಂಪಿಯು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕಿದೆ. ಕಾಮಗಾರಿ ವಿಳಂಬವಾಗುತ್ತಿರುವುದರಿಂದ ನಾವು ನಿಗದಿತ ಅವಧಿಯೊಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ. ಬೆಳ್ಳಂದೂರು ನಾಲೆಯಲ್ಲಿ ಭಾರಿ ನೊರೆ ಕಾಣಿಸಿಕೊಳ್ಳುವುದಕ್ಕೂ ಇದೇ ಕಾರಣ’ ಎಂದು ಉಲ್ಲೇಖಿಸಿದ್ದಾರೆ.

‘ಬೆಳ್ಳಂದೂರು ಹಾಗೂ ಯಮಲೂರು ಕೋಡಿಗಳ ಬಳಿ ತೂಬನ್ನು ಬಲಪಡಿಸುವ ಕಾಮಗಾರಿಯನ್ನು ಬಿಡಿಎ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿದೆ. ಆದರೆ ಬಿಬಿಎಂಪಿ ಕಾಮಗಾರಿಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ. ಹಾಗಾಗಿ ಯಮಲೂರು ಕೋಡಿಯಲ್ಲಿ ನೀರು ಕಟ್ಟಿಕೊಂಡಿತ್ತು. ಇದರಿಂದ ಕೆರೆಯಲ್ಲಿ ಸಂಗ್ರಹವಾದ ಹೆಚ್ಚುವರಿ ನೀರು ಬೆಳ್ಳಂದೂರು ಕೋಡಿಯ ಮೂಲಕ ಹರಿದು ಹೋಗಿದೆ. ಬಿಡಿಎ ವತಿಯಿಂದ ನಿರ್ಮಿಸಲಾಗಿದ್ದ ಒಡ್ಡುಗಳು ಈ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ’ ಎಂದು ಅವರು ದೂರಿದ್ದಾರೆ.

‘ಈ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು. ಯಮಲೂರು ಕೋಡಿಯಲ್ಲಿ ನಿರ್ಮಿಸಿರುವ ತಾತ್ಕಾಲಿಕ ಒಡ್ಡುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ, ಎನ್‌ಜಿಟಿಯಿಂದ ಮತ್ತೊಂದು ನೋಟಿಸ್‌ ಸ್ವೀಕರಿಸಬೇಕಾದ ಪ್ರಮೇಯ ಎದುರಾಗಬಹುದು.ಇಂತಹ ಪರಿಸ್ಥಿತಿ ಎದುರಾದರೆ ಬಿಬಿಎಂಪಿಯನ್ನು ಸಮರ್ಥಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !