ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಆರ್‌ಪಿ: ಕಬ್ಬು ಬೆಳೆಗಾರರಿಂದ ಪ್ರತಿಭಟನೆ

‘ಫ್ರೀಡಂ ಪಾರ್ಕ್‌’ನಲ್ಲಿ ರೈತ ಸಂಘಟನೆಗಳಿಂದ ಪೊರಕೆ ಹಿಡಿದು ಚಳವಳಿ
Last Updated 23 ನವೆಂಬರ್ 2022, 20:49 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬಿನ ಬೆಳೆಗೆ ‘ನ್ಯಾಯಸಮ್ಮತ ಹಾಗೂ ಪ್ರೋತ್ಸಾಹದಾಯಕ ದರ’ (ಎಫ್‌ಆರ್‌ಪಿ) ನಿಗದಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಯು 2ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ರೈತರು ಪೊರಕೆ ಚಳವಳಿ ನಡೆಸಿದರು.

ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

‘ಎಫ್‌ಆರ್‌ಪಿ ದರ ನಿಗದಿಗೆ ರಾಜ್ಯ ಸರ್ಕಾರವು ವಿಳಂಬ ನೀತಿ ಅನುಸರಿಸುತ್ತಿದೆ. ಸಮಿತಿ ರಚಿಸಿ ನ.20ರ ಒಳಗೆ ತೀರ್ಮಾನ ಕೈಗೊಳ್ಳುವುದಾಗಿ ಸಕ್ಕರೆ ಖಾತೆ ಸಚಿವರು ನೀಡಿದ್ದ ಭರವಸೆ ಹುಸಿಯಾಗಿದೆ. ಈ ಸರ್ಕಾರವು ನುಡಿದಂತೆ ನಡೆಯುತ್ತಿಲ್ಲ’ ಎಂದು ಬೆಳೆಗಾರರು ಆಪಾದಿಸಿದರು.

ಕುರುಬೂರು ಶಾಂತಕುಮಾರ್‌ ಮಾತನಾಡಿ, ‘ಕಬ್ಬಿನ ಉತ್ಪಾದನಾ ವೆಚ್ಚವು ಶೇ 20ರಷ್ಟು ಏರಿಕೆಯಾಗಿದೆ. ಆದರೆ, ಸೂಕ್ತ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ನಿಗದಿ ಮಾಡುವಾಗ ಬೆಳೆಗಾರರಿಗೆ ಮೋಸ ಎಸಗುತ್ತಿದೆ. ಕಬ್ಬು ಪೂರೈಕೆ ಮಾಡಿದ ರೈತನಿಗೆ 14 ದಿನದಲ್ಲಿ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದ್ದರೂ ಪಾಲನೆ ಮಾಡುತ್ತಿಲ್ಲ. ಕಾರ್ಖಾನೆಗಳ ವಿರುದ್ಧ ಯಾವ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

‘ಕಬ್ಬು ಬೆಳೆಗಾರರು ದೂರು ನೀಡಿದರೆ ಕಸದ ಬುಟ್ಟಿಗೆ ಎಸೆಯಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲೇ 189 ರೈತರಿಗೆ ಕಬ್ಬಿನ ಹಣ ಪಾವತಿಸಿಲ್ಲ’ ಎಂದು ಆಪಾದಿಸಿದರು.

ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಕುಮಾರ್‌ ಬುಬಾಟಿ, ಧಾರವಾಡ ಜಿಲ್ಲಾ ಅಧ್ಯಕ್ಷ ನಿಜಗುಣ ಕೆಲಗೇರಿ, ರಾಜ್ಯ ಉಪಾಧ್ಯಕ್ಷ ಸುರೇಶ್ ಮ. ಪಾಟೀಲ, ಉಳುವಪ್ಪ ಬಳಗೇರಿ, ನಿಂಗನಗೌಡ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಗುರುಸಿದ್ದಪ್ಪ ಕೂಟಗಿ, ಎಸ್‌.ಡಿ ಸಿದ್ನಾಳ, ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ಬಿರಾದಾರ, ಜಿ.ವಿ.ಲಕ್ಷ್ಮಿದೇವಿ, ಮಂಜುಳಾ ಪಾಟೀಲ್, ಪಿ.ಸೋಮಶೇಖರ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬರಡನಪುರ ನಾಗರಾಜ್, ಕಿರಗಸೂರ್ ಶಂಕರ, ಹಾಡ್ಯರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT