ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಹಣ್ಣುಗಳ ಬೆಲೆ ಏರಿಕೆ, ತರಕಾರಿ ಬೆಲೆ ಸ್ಥಿರ

ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆ ಅವಧಿಯಲ್ಲಿ ಹಣ್ಣುಗಳಿಗೆ ಭಾರಿ ಬೇಡಿಕೆ
Last Updated 6 ಮಾರ್ಚ್ 2023, 20:54 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ದಾಹ ತಣಿಸುವ ಹಣ್ಣುಗಳ ಬೆಲೆ ತುಸು ಏರಿಕೆಯಾಗಿದೆ. ತರಕಾರಿ ದರ ಮತ್ತೆ ಇಳಿಕೆಯಾಗಿದ್ದರೆ, ಸೊಪ್ಪು, ನಿಂಬೆಹಣ್ಣಿನ ಬೆಲೆ ಏರುತ್ತಿದೆ.

ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆ ಅವಧಿಯಲ್ಲಿ ಹಣ್ಣುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಮಾರುಕಟ್ಟೆಗಳಿಗೆ ತರಕಾರಿಗಳ ಆವಕ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಹಲವು ತರಕಾರಿಗಳ ದರ ಕೊಂಚ ಕುಸಿದಿದೆ. ಹದಿನೈದು ದಿನಗಳ ಹಿಂದೆ ಬೀನ್ಸ್‌ ದರ ಕೆ.ಜಿ.ಗೆ ₹70ಕ್ಕಿಂತ ಹೆಚ್ಚು ದಾಟಿತ್ತು. ಈಗ ₹40ರಂತೆ ಮಾರಾಟವಾಗುತ್ತಿದೆ. ಹಿರೇಕಾಯಿ ಕೆ.ಜಿಗೆ ₹60ರಂತೆ ಮಾರಾಟವಾಗುತ್ತಿದೆ. ಆಲೂಗಡ್ಡೆ ಕೆ.ಜಿಗೆ ₹20, ಬೆಂಡೆಕಾಯಿ ಮತ್ತು ಬದನೆಕಾಯಿ ₹40, ಹೂಕೋಸು ₹30ರಂತೆ ಮಾರಾಟವಾಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ವ್ಯಾಪಾರಿಗಳಾದ ತಬ್ರೇಜ್‌ ಮತ್ತು ರಾಜಣ್ಣ ಮಾಹಿತಿ ನೀಡಿದರು.

ಏರುಗತಿಯಲ್ಲಿದ್ದ ಟೊಮೆಟೊ ಬೆಲೆ ಕೂಡ ನಿಯಂತ್ರಣಕ್ಕೆ ಬಂದಿದ್ದು, ಕೆ.ಜಿಗೆ ₹20ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ತಮಿಳುನಾಡು ಏಲಕ್ಕಿ ಬಾಳೆಹಣ್ಣು ಬಾರದೇ ಸ್ಥಳೀಯ ಹಣ್ಣು ಮಾತ್ರ ಮಾರಾಟವಾಗು
ತ್ತಿದೆ. ಹೀಗಾಗಿ ಬೆಲೆ ಪ್ರತಿ ಕೆ.ಜಿ ₹80ರ ಗಡಿ ದಾಟಿದೆ.

ಹಣ್ಣು ದುಬಾರಿ: ‘ಬೇಸಿಗೆಯಲ್ಲಿ ದೇಹದ ದಾಹ ತಣಿಸಲು ಹಣ್ಣಿನ ರಸಕ್ಕೆ ಜನರು ಮೊರೆಹೋಗುತ್ತಿದ್ದು, ಬಳಕೆ, ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಬೆಲೆ ಹೆಚ್ಚಾಗುತ್ತಿದೆ. ಕೆ.ಜಿ ಸೇಬು ಹಣ್ಣು ₹160– ₹200ರವರೆಗೆ ಮಾರಾಟವಾಗುತ್ತಿದೆ. ದಾಳಿಂಬೆ, ಶರದ್ ದ್ರಾಕ್ಷಿ ಕೆ.ಜಿಗೆ ₹160, ದಾಳಿಂಬೆ ₹200, ಕಿತ್ತಳೆ (ಸಿಟ್ರಸ್‌) ₹160ರಂತೆ ಮಾರಾಟವಾಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹಣ್ಣಿನ ವ್ಯಾಪಾರಿ ಇಮ್ರಾನ್ ತಿಳಿಸಿದರು.

‘ಬೇಸಿಗೆಯಲ್ಲಿ ಸೊಪ್ಪಿನ ದರವೂ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಮೆಂತ್ಯ ಸೊಪ್ಪು ಕಟ್ಟಿಗೆ ₹20, ಕೊತ್ತಂಬರಿ ₹20, ಸಬ್ಬಕ್ಕಿ ಕೆ.ಜಿ ₹15, ಪಾಲಕ್ ಸೊಪ್ಪು ₹10ಕ್ಕೆ ಮಾರಾಟವಾಗುತ್ತಿದೆ’ ಎಂದು ಸೊಪ್ಪಿನ ವ್ಯಾಪಾರಿ ಶಿವುಕುಮಾರ್ ಹೇಳಿದರು.

ಕೆ.ಜಿ. ಈರುಳ್ಳಿಗೆ ₹15
ಈರುಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವಾರದಲ್ಲಿ ಸಗಟು ದರ ಪ್ರತಿ ಕೆ.ಜಿ.ಗೆ ₹ 25ರಿಂದ ₹ 30ರಂತೆ ಮಾರಾಟವಾಗುತ್ತಿದ್ದ ಈರುಳ್ಳಿ ಇದೀಗ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹15 ರಂತೆ ಮಾರಾಟವಾಗುತ್ತಿದೆ. ಪ್ರತಿ ಕೆ.ಜಿ ಸಗಟು ದರ ₹7ರಿಂದ ₹10ರಂತೆ ಸೋಮವಾರ ಮಾರಾಟವಾಯಿತು.

‘ರಾಜ್ಯ ಮತ್ತು ಹೊರ ರಾಜ್ಯದಿಂದ ಬೆಂಗಳೂರಿನ ಮಾರುಕಟ್ಟೆಗೆ ಈರುಳ್ಳಿ ಆವಕ ಹೆಚ್ಚಾಗಿರುವ ಕಾರಣ ದಿಢೀರ್ ಬೆಲೆ ಕುಸಿತಗೊಂಡಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲಿ ಈರುಳ್ಳಿ ಬೆಳೆಯ ಇಳುವರಿ ಹೆಚ್ಚಾಗಿರುವ ಕಾರಣ ಪೂರೈಕೆ ಅಧಿಕವಾಗಿದ್ದು, ಬೇಡಿಕೆ ಕುಸಿದಿದೆ. ಸೋಮವಾರ ಬೆಂಗಳೂರಿಗೆ 60,000 ಚೀಲಗಳು(50 ಕೆ.ಜಿಯ) ಪೂರೈಕೆಯಾಗಿವೆ’ ಎಂದು ಬೆಂಗಳೂರು ಆಲೂಗಡ್ಡೆ–ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ. ಶಿವಶಂಕರ ಮಾಹಿತಿ ನೀಡಿದರು.‌

ಬೆಂಗಳೂರಿನ ವಿವಿಧ ಎಪಿಎಂಸಿಗಳಿಗೆ ಪುಣೆ ಈರುಳ್ಳಿ 15,235 ಕ್ವಿಂಟಲ್‌, ಈರುಳ್ಳಿ 6,095 ಕ್ವಿಂಟಲ್‌, ಬೆಂಗಳೂರು ಸಣ್ಣ ಈರುಳ್ಳಿ 3,046 ಮತ್ತು ಸ್ಥಳೀಯ ಈರುಳ್ಳಿ 6,095 ಕ್ವಿಂಟಲ್‌ ಸೇರಿ ಒಟ್ಟು 30,471 ಕ್ವಿಂಟಲ್‌ ಈರುಳ್ಳಿ ಪೂರೈಕೆಯಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT