ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಸಂಶೋಧನೆಗೆ ಪೂರ್ಣ ಸಹಕಾರ

ಪ್ಲಾಸ್ಟಿಕ್‌ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಕಟ್ಟಡ ಉದ್ಘಾಟನೆ; ಮುಖ್ಯಮಂತ್ರಿ ಅಭಯ
Last Updated 28 ಡಿಸೆಂಬರ್ 2019, 5:40 IST
ಅಕ್ಷರ ಗಾತ್ರ

ದೇವನಹಳ್ಳಿ: ‘ದೇಶದ ಆರ್ಥಿಕ ಪ್ರಗತಿಯಲ್ಲಿತಾಂತ್ರಿಕ ಸಂಶೋಧನಾ ಕೇಂದ್ರಗಳು ಮಹತ್ತರ ಪಾತ್ರ ವಹಿಸಲಿದ್ದು, ನೂತನ ಕೇಂದ್ರಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಭರವಸೆ ನೀಡಿದರು.

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೈಗಾರಿಕಾ ವಲಯದಲ್ಲಿ ಕೇಂದ್ರ ಪ್ಲಾಸ್ಟಿಕ್ ಎಂಜಿನಿಯರಿಗ್ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ನಗರದ ವ್ಯಾಪ್ತಿಯಲ್ಲಿ ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿ. ಬೆಳೆಯುತ್ತಿರುವ ನಗರ ಪಾಸ್ಟಿಕ್ ಮುಕ್ತ ಹಾಗೂ ಪರಿಸರ ಸಂರಕ್ಷಿತ ತಾಣವಾಗಬೇಕು. ಪ್ರಸ್ತುತ ಇಲ್ಲಿನ ಸಂಶೋಧನಾ ಘಟಕದ ಉದ್ದೇಶವೂ ಆದೇ ಆಗಿದೆ’ ಎಂದು ಹೇಳಿದರು.

ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರು, ‘ಬೆಂಗಳೂರು ಕಸಮುಕ್ತ ನಗರವಾಗಬೇಕು ಎಂಬುದು ಅನಂತ ಕುಮಾರ್‌ ಅವರ ಆಸೆಯಾಗಿತ್ತು. ಈ ಮೂಲಕ ಅದು ಈಡೇರಲಿದೆ. ಹೆಚ್ಚುವರಿ 5 ಎಕರೆ ಭೂಮಿಯಲ್ಲಿ ಪಾಲಿಮರ್ ಸಂಶೋಧನಾ ಕೇಂದ್ರದ 5 ಘಟಕಗಳು ಆರಂಭವಾಗಲಿವೆ. ದೇಶದಲ್ಲಿ 37 ಶಾಖೆಗಳಿವೆ. ನೂತನ ಘಟಕಗಳ ಆರಂಭದಿಂದ 4 ರಿಂದ 5 ಲಕ್ಷ ಯುವಜನರಿಗೆ ತರಬೇತಿ ಸಿಗಲಿದೆ’ ಎಂದರು.

‘ರಾಯಚೂರು ಜಿಲ್ಲೆಯಲ್ಲಿ 5 ಸಾವಿರ ಎಕರೆ ಪ್ರದೇಶದಲ್ಲಿ ದೇಶದ ಮೊದಲ ಬೃಹತ್‌ ಫಾರ್ಮಾ ಪಾರ್ಕ್ ಅಭಿವೃದ್ಧಿ ಪಡಿಸಲಾಗುತ್ತದೆ. ಫಾರ್ಮಾ ರಾಸಾಯನಿಕಗಳ ಕೊರತೆ ನೀಗಿಸಲು ಇದು ನೆರವಾಗಲಿದೆ. ವಿವಿಧ ರಾಜ್ಯಗಳ ಸಂಪರ್ಕ ಕೊಂಡಿಯಾಗಿಯೂ ಇದು ಕೆಲಸ ಮಾಡಲಿದೆ’ ಎಂದು ಹೇಳಿದರು.

ಶಾಸಕ ಕೃಷ್ಣ ಬೈರೇಗೌಡ, ‘ಜಾಗತಿಕ ಮಟ್ಟದಲ್ಲಿ ಪರಿಸರ ಹಾಳಾಗುತ್ತಿದೆ. ಭವಿಷ್ಯದಲ್ಲಿ ಭಾರಿ ಅನಾಹುತ ಆಗಲಿದೆ. ಜೀವನದಲ್ಲಿ ಸಮತೋಲನ ಅಗತ್ಯ. ಪೂರಕವಾಗಿ ಇಲ್ಲಿ ಸಂಶೋಧನಾ ಘಟಕ ಆರಂಭವಾಗಿದೆ’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥ ನಾರಾಯಣ, ‘ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಏಷ್ಯಾ ಖಂಡದಲ್ಲಿಯೇ ಬೆಂಗಳೂರು ಮುಂಚೂಣಿಯಲ್ಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 33 ಸಾವಿರ ಕಿ.ಮೀ ರಸ್ತೆ ಇದೆ ಎಂದರೆ ಚರಂಡಿಗೆ ಬೀಳುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಎಷ್ಟಿದೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT