ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ–20 ಇಂಧನ ಪರಿವರ್ತನಾ ಸಭೆ

ನಗರದಲ್ಲಿ ಫೆ.5ರಿಂದ 7ರವರೆಗೆ ಆಯೋಜನೆ
Last Updated 30 ಜನವರಿ 2023, 19:25 IST
ಅಕ್ಷರ ಗಾತ್ರ

ಬೆಂಗಳೂರು: ಜಿ–20 ರಾಷ್ಟ್ರಗಳ ಇಂಧನ ‍ಪರಿವರ್ತನಾ ಕಾರ್ಯಕಾರಿ ಗುಂಪಿನ ಸಭೆಯು ಫೆಬ್ರುವರಿ 5ರಿಂದ 7ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್‌ ಕುಮಾರ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತಕ್ಕೆ ಜಿ–20 ಗುಂಪಿನ ಅಧ್ಯಕ್ಷತೆ ದೊರಕಿರುವುದರಿಂದ ದೇಶದಾದ್ಯಂತ ಹಲವು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಇಂಧನ ಪರಿವರ್ತನೆಗೆ ಸಂಬಂಧಿಸಿದ ಸಭೆಯು ಬೆಂಗಳೂರಿನಲ್ಲಿ ನಿಗದಿಯಾಗಿದೆ. ಜಿ–20 ರಾಷ್ಟ್ರಗಳು ಹಾಗೂ ವಿಶ್ವಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌, ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಮುಂಚೂಣಿ ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಿವೆ’ ಎಂದರು.

ಇದು ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಮೊದಲ ಸಭೆ. ತಾಂತ್ರಿಕ ಅಡತಡೆಗಳನ್ನು ನಿವಾರಿಸುವ ಮೂಲಕ ಇಂಧನ ಪರಿವರ್ತನೆ, ಇಂಧನ ಪರಿವರ್ತನೆಗೆ ಕಡಿಮೆ ಬಡ್ಡಿದರದ ಹಣಕಾಸು, ಇಂಧನ ಸುರಕ್ಷತೆ ಮತ್ತು ಬಹುವಿಧದ ಪೂರೈಕೆ ಜಾಲ, ಇಂಧನ ಸಾಮರ್ಥ್ಯ, ಕೈಗಾರಿಕೆಗಳಲ್ಲಿ ಕಡಿಮೆ ಇಂಗಾಲ ಹೊರಸೂಸುವಿಕೆಯ ಪರಿವರ್ತನೆ ಮತ್ತು ಜವಾಬ್ದಾರಿಯುತ ಬಳಕೆ, ಭವಿಷ್ಯದ ಇಂಧನಗಳು ಹಾಗೂ ಸಾರ್ವತ್ರಿಕವಾಗಿ ಸ್ವಚ್ಛ ಇಂಧನದ ಲಭ್ಯತೆ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಇಂಧನ ಪರಿವರ್ತನೆಯ ಮಾರ್ಗ ಎಂಬ ವಿಚಾರಗಳನ್ನು ಕೇಂದ್ರೀಕರಿಸಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.

ಭವಿಷ್ಯದ ಇಂಧನಗಳಾಗಿ ಜೈವಿಕ ಇಂಧನ ಮತ್ತು ಹಸಿರು ಜಲಜನಕದ ಬಳಕೆ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಯಲಿದೆ. ಇಂಧನ ಕ್ಷೇತ್ರದಲ್ಲಿನ ಮಾಲಿನ್ಯ ತಗ್ಗಿಸುವ ಸಾಧ್ಯತೆ, ಅವಕಾಶಗಳು ಮತ್ತು ಅನುಷ್ಠಾನದ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು. ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳು ಫೆ. 7ರಂದು ಪಾವಗಡ ಸೌರಶಕ್ತಿ ಪಾರ್ಕ್‌ಗೆ ಭೇಟಿ ನೀಡಲಿದ್ದಾರೆ ಎಂದರು.

2030ರ ವೇಳೆಗೆ ದೇಶವು ಶೇಕಡ 40ರಷ್ಟು ಇಂಧನವನ್ನು ಪಳೆಯುಳಿಕೆಯೇತರ ಮೂಲಗಳಿಂದ ಪಡೆಯುವ ಗುರಿ ಹೊಂದಿತ್ತು. 2022ರಲ್ಲೇ ಅದನ್ನು ಸಾಧಿಸಲಾಗಿದೆ. ಇಂಧನ ಕ್ಷೇತ್ರದಲ್ಲಿನ ಮಾಲಿನ್ಯವನ್ನು 2030ರ ವೇಳೆಗೆ ಶೇ 4.5ಕ್ಕೆ ತಗ್ಗಿಸುವ ಗುರಿ ಇದೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಇಂಧನ ಕ್ಷೇತ್ರದಲ್ಲಿ ಅತಿಕಡಿಮೆ ಮಾಲಿನ್ಯ ಹೊಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT