ಬುಧವಾರ, ಮೇ 12, 2021
18 °C

‘ದೇಶದ ಸೃಜನಶೀಲತೆಯ ರಾಜಧಾನಿ ಕರ್ನಾಟಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆ್ಯನಿಮೇಷನ್ ಹಾಗೂ ಗೇಮಿಂಗ್‍ಗೆ ಪ್ರಾಮುಖ್ಯತೆ ನೀಡಿದ ದೇಶದ ಮೊದಲ ರಾಜ್ಯ ಕರ್ನಾಟಕ. ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಈ ವಲಯದಲ್ಲಿ ಉದ್ಯಮ ಸೃಷ್ಟಿಗೆ ‘ಬೆಂಗಳೂರು ಜಿಎಎಫ್ಎಕ್ಸ್ 2019’ ಒಂದು ಮಹತ್ವದ ಹೆಜ್ಜೆ ’ಎಂದು ಐಟಿಬಿಟಿ ಸಚಿವ ಜಿ. ಪರಮೇಶ್ವರ ಹೇಳಿದರು.

ಕರ್ನಾಟಕ ಸರ್ಕಾರ ಹಾಗೂ ಎಬಿಎಐ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಆರ್ಟ್ ಮತ್ತು ಆ್ಯನಿಮೇಷನ್ ಸ್ಪರ್ಧೆ ‘ಬೆಂಗಳೂರು ಜಿಎಎಫ್ಎಕ್ಸ್ 2019’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸೃಜನಾತ್ಮಕ ಕಲೆ ಹೊಂದಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ತಮ್ಮ ಮಾದರಿಗಳ ಮೂಲಕ ಮುಂದೆ ಬರಬೇಕು. ಇದಕ್ಕೆ ಕರ್ನಾಟಕ ಸರ್ಕಾರದಿಂದ ಅಗತ್ಯ ಸಹಾಯ ದೊರೆಯಲಿದೆ’ ಎಂದರು. 

‘ಜಿಎಎಫ್ಎಕ್ಸ್ ಕಾರ್ಯಕ್ರಮದ ಮೂಲಕ ಆ್ಯನಿಮೇಷನ್‌, ವಿಷುವಲ್‌ ಎಫೆಕ್ಟ್ಸ್‌, ಕಾಮಿಕ್ಸ್‌ ಅಂಡ್‌ ಗೇಮಿಂಗ್‌ (ಎವಿಜಿಸಿ) ವಲಯದ ಶ್ರೇಷ್ಠ ಯೋಚನಾ ಶಕ್ತಿ ಹೊಂದಿದ ವ್ಯಕ್ತಿಗಳನ್ನು ಒಂದೇ ವೇದಿಕೆ ಮೇಲೆ ನಾವು ಯಶಸ್ವಿಯಾಗಿ ತಂದಿದ್ದೇವೆ. ವಿದ್ಯಾರ್ಥಿಗಳು ತಮ್ಮ ಸಲಹೆಗಾರರ ಜತೆ ಸಂಪರ್ಕ ಸಾಧಿಸಲು ಬಿ2ಬಿ ರೀತಿಯಲ್ಲಿ ಈ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಲಾಯಿತು’ ಎಂದು ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ಶ್ರೀನಿವಾಸ್ ಮಾಹಿತಿ ನೀಡಿದರು. 

‘ಎವಿಜಿಸಿ ನೀತಿಯನ್ನು ಈ ಹಿಂದೆ ಐಟಿಬಿಟಿ ಇಲಾಖೆ ಅಡಿಯಲ್ಲಿಯೇ ಪರಿಚಯ ಮಾಡಿದ್ದೆವು. ಈ ಉದ್ಯಮವನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡಲು ಬದ್ಧರಾಗಿದ್ದೇವೆ' ಎಂದು ರಾಜ್ಯ ಐಟಿಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದರು.

ಮೂರು ದಿನದ ಕಾರ್ಯಕ್ರಮದಲ್ಲಿ ಗೇಮಿಂಗ್ ಉದ್ಯಮ ಜಗತ್ತಿನ ಬಗ್ಗೆ ಚರ್ಚೆ, ಚಿತ್ರ ವೀಕ್ಷಣೆ, ಸಂವಾದ ನಡೆದವು. ಭಾನುವಾರ ಸ್ಥಳದಲ್ಲೇ ಚಿತ್ರ ಬಿಡಿಸುವುದು (ಲೈವ್ ಸ್ಕೆಚ್), ಮಣ್ಣಿನ ಮೂರ್ತಿ ನಿರ್ಮಾಣ ಮಾಡುವ ಸ್ಪರ್ಧೆಗಳು ಜರುಗಿದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 25 ಕಾಲೇಜುಗಳಿಂದ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು