ಗಾಂಧೀಜಿ ಶ್ರದ್ಧಾವಂತ ಹಿಂದೂ: ವಿ.ನಾಗರಾಜ್‌

7
‘ಫಸ್ಟ್‌’ ಸಂಸ್ಥೆಯ ಕಾರ್ಯಕ್ರಮದಲ್ಲಿ ಗುಣಗಾನ

ಗಾಂಧೀಜಿ ಶ್ರದ್ಧಾವಂತ ಹಿಂದೂ: ವಿ.ನಾಗರಾಜ್‌

Published:
Updated:

ಬೆಂಗಳೂರು: ಗಾಂಧೀಜಿ ಒಬ್ಬ ಶ್ರದ್ಧಾವಂತ ಮತ್ತು ಪ್ರಜ್ಞಾವಂತ ಹಿಂದೂ ಎಂದು ಆರ್‌.ಎಸ್‌.ಎಸ್‌ ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ್‌ ಬಣ್ಣಿಸಿದರು. 

ಗಾಂಧಿ ಜಯಂತಿ ಪ್ರಯುಕ್ತ ಫೌಂಡೇಷನ್‌ ಫಾರ್‌ ಇಂಡಿಕ್‌ ರಿಸರ್ಚ್‌ ಸ್ಟಡೀಸ್ (ಫಸ್ಟ್‌) ಸಂಸ್ಥೆ ನಗರದ ಡಾಲಿ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಮಯಾತೀತ ಮಹಾತ್ಮಾ ಗಾಂಧಿ’ ಕುರಿತು ಅವರು ಮಾತನಾಡಿದರು. 

ಇಡೀ ಉಪನ್ಯಾಸದಲ್ಲಿ ಗಾಂಧೀಜಿ ಅವರ ಅಧ್ಯಾತ್ಮಿಕ, ಧಾರ್ಮಿಕ ನಿಲುವುಗಳು, ಹಿಂದೂ ತತ್ವಗಳ ಜತೆ ಗಾಂಧೀಜಿ ಬದುಕಿನ ಸಾಮ್ಯತೆಯ ಚರ್ಚೆ ನಡೆಯಿತು. ಸೀಮಿತ ಪ್ರಮಾಣದ ಶ್ರೋತೃ ಸಮೂಹ ಗಾಂಧೀಜಿ ಚಿಂತನೆಗಳನ್ನು ಗಂಭೀರವಾಗಿ ಆಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ವೈಷ್ಣವ ಜನತೋ ಹಾಡಿನ ಗಾಯನ ನಡೆಯಿತು. ಡಾಲಿ ಹಾಲ್‌ಗೆ ಗಾಂಧೀಜಿ ಅವರು ಬಂದಿದ್ದ ದಿನಗಳನ್ನು ಮೆಲುಕು ಹಾಕಲಾಯಿತು. 

ಗಾಂಧೀಜಿ ಮತ್ತು ಹಿಂದುತ್ವ: ನಾಗರಾಜ್‌ ಅವರ ಮಾತಿನ ಪ್ರಕಾರ. ‘ಗಾಂಧೀಜಿ ಅವರ ಎಲ್ಲ ಚಿಂತನೆಗಳು ಹಿಂದೂ ಸಂಸ್ಕೃತಿಯ ಹಿನ್ನೆಲೆಯಿಂದಲೇ ಬಂದಿವೆ. ಭಗವದ್ಗೀತೆ ಅವರಿಗೆ ಪ್ರಿಯವಾದ ಗ್ರಂಥವಾಗಿತ್ತು. ಸಂಘ (ಆರ್‌ಎಸ್‌ಎಸ್‌) ಚಿಂತನೆ ಮತ್ತು ಗಾಂಧೀಜಿ ವಿಚಾರಧಾರೆಯಲ್ಲಿ ಸಾಮ್ಯತೆ ಇತ್ತು’ ಎಂದರು.

‘ರಾಜಕಾರಣದಲ್ಲಿ ಅಧ್ಯಾತ್ಮವನ್ನು ಹೇಗೆ ತರಬಹುದು ಎಂಬುದನ್ನು ಗಾಂಧೀಜಿ ತೋರಿಸಿಕೊಟ್ಟರು. ಗೋಪಾಲಕೃಷ್ಣ ಗೋಖಲೆ ಅವರು ರಾಜಕಾರಣಕ್ಕೆ ಹೋಗುತ್ತೇನೆಂದಾಗ ಗಾಂಧೀಜಿ ಅವರು ರಾಜಕೀಯವನ್ನು ಅಧ್ಯಾತ್ಮೀಕರಣವನ್ನಾಗಿಸಬೇಕು ಎಂದು ಕಿವಿಮಾತು ಹೇಳಿದ್ದರು’ ಎಂದು ಸ್ಮರಿಸಿದರು. 

‘ಜಗತ್ತಿನ ಸಮಾಜಗಳು ಗತಿಶೀಲವಾಗಿವೆ. ಇದಕ್ಕೆ ಕಾರಣ ಸಮಾಜದೊಳಗಿನ ಅಂತಃಶಕ್ತಿ. ಇದು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ವ್ಯಾಪಕವಾಗಿತ್ತು. ಆ ಕಾಲಘಟ್ಟದಲ್ಲಿ ಬಂದ ಮಹನೀಯರಲ್ಲಿ ಅಗಾಧವಾದ ಅಂತಃಶಕ್ತಿ ಇತ್ತು. ಅಂಥವರಲ್ಲಿ ಗಾಂಧೀಜಿ ಅಗ್ರಮಾನ್ಯರು’ ಎಂದರು.

ಸಂಘದ ಪ್ರಾಂತ ಕಾರ್ಯವಾಹಕ ಡಾ.ಜಯಪ್ರಕಾಶ ಮಾತನಾಡಿ, ‘ಯಾವುದೇ ಹೋರಾಟದಲ್ಲಿ ಸತ್ಯ ಮತ್ತು ಸತ್ವವನ್ನು ತೋರಿಸಿಕೊಟ್ಟವರು ಗಾಂಧೀಜಿ. ಈ ರೀತಿಯ ಹೋರಾಟದ ಭಾವವನ್ನು ಜನಸಾಮಾನ್ಯರಲ್ಲೂ ತರಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಹೋರಾಟದ ವಿವಿಧ ಮುಖಗಳಲ್ಲಿ ಗಾಂಧೀಜಿ ಕಾಣಸಿಗುತ್ತಾರೆ. ಅವರ ಜೀವನವನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು’ ಎಂಬುದನ್ನು ಆಲೋಚಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !