ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಚತುರ್ಥಿ: ಖರೀದಿಗೆ ಮುಗಿಬಿದ್ದ ಜನ

Last Updated 21 ಆಗಸ್ಟ್ 2020, 20:37 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ಚತುರ್ಥಿ ಆಚರಣೆ ನಿಮಿತ್ತ ಹೂವು, ಹಣ್ಣಿನ ಖರೀದಿಗೆ ಜನರು ಶುಕ್ರವಾರ ಮುಗಿಬಿದ್ದರು.

ಸದ್ಯ ಕೆ.ಆರ್.ಮಾರುಕಟ್ಟೆ ಮುಚ್ಚಿದೆ. ಗಾಂಧಿ ಬಜಾರ್, ಜಯನಗರ, ಬಸವನಗುಡಿ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರ ಸೇರಿ ನಗರದ ವಿವಿಧ ಭಾಗಗಳಲ್ಲಿ ಹೂವು, ಹಣ್ಣಿನ ತಾತ್ಕಾಲಿಕ ಮಳಿಗೆಗಳು ತಲೆ ಎತ್ತಿದ್ದವು. ಗಣೇಶೋತ್ಸವದ ಅದ್ದೂರಿ ಆಚರಣೆಗೆ ನಿರ್ಬಂಧ ಇರುವುದರಿಂದ ಈ ಬಾರಿ ಮನೆಗಳಲ್ಲಿ ವಿಜೃಂಭಣೆಯಿಂದ ಹಬ್ಬ ಆಚರಿಸಲು ಜನರು ಮುಂದಾಗಿದ್ದಾರೆ.

ಗಣೇಶ ಕೂರಿಸಲು ಸಿದ್ಧತೆ: ಮಹಿಳೆಯರು ಮನೆಗಳಲ್ಲಿ ಗೌರಿ ವ್ರತವನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಿದರು. ಇತ್ತ ಗಣೇಶನನ್ನು ಪ್ರತಿಷ್ಠಾಪಿಸಲು ನಗರದ ವಿವಿಧ ಭಾಗಗಳಲ್ಲಿಯುವಕರು ಚಪ್ಪರದ ಕುಟೀರ,ಮಂಟಪಗಳ ಸಿದ್ಧತೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು.

ಈ ಬಾರಿ 4 ಅಡಿಗಿಂತ ಹೆಚ್ಚು ಎತ್ತರದ ಗಣಪನ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಿಲ್ಲ. ಅದ್ಧೂರಿ ಕಾರ್ಯಕ್ರಮ ಹಾಗೂ ಮೆರವಣಿಗೆಗೆ ನಿರ್ಬಂಧ ಹೇರಿರುವುದರಿಂದ ಚಿಕ್ಕ-ಚೊಕ್ಕದಾದ ಗಣೇಶ ಮೂರ್ತಿಯನ್ನು ಕೂರಿಸಿ, ಆರಾಧಿಸಲು ಸಿದ್ಧತೆ ನಡೆಸಿದ್ದಾರೆ.

‘15 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿ ಹಬ್ಬದ ಆಚರಣೆಗೆ ಸರ್ಕಾರ ನಿರ್ಬಂಧ ಹೇರಿದ ಕಾರಣ ಬೇಸರಗೊಂಡಿದ್ದೆವು. ಪರಿಷ್ಕೃತ ಮಾರ್ಗಸೂಚಿ ಬಂದ ನಂತರ ಸಂತಸವಾಯಿತು' ಎನ್ನುತ್ತಾರೆ ವಿಘ್ನೇಶ್ವರ ಗೆಳೆಯರ ಬಳಗ ಸಮಿತಿಯ ರೂಪೇಶ್.

‘ಕೊರೊನಾ ಕಾರಣಕ್ಕೆ ಹೆಚ್ಚು ಎತ್ತರದ ಮೂರ್ತಿಗಳನ್ನು ತಯಾರಿಸಲಿಲ್ಲ. ಈ ಬಾರಿ ಬಣ್ಣದ ಮೂರ್ತಿಗಳಿಗಿಂತ ಪರಿಸರಸ್ನೇಹಿ ಹಾಗೂ ಜೇಡಿಮಣ್ಣಿನ ಮೂರ್ತಿಗಳನ್ನು ಜನ ಹೆಚ್ಚಾಗಿ ಖರೀದಿಸಿದ್ದಾರೆ’ ಎಂದು ಕೊಡಿಗೇಹಳ್ಳಿ ಸಮೀಪದ ಗಣೇಶ ಮೂರ್ತಿ ತಯಾರಕ ಮಹೇಶ್ ತಿಳಿಸಿದರು.

ಸುರಕ್ಷತೆ ಕಾಪಾಡುವಂತೆ ಪಾಲಿಕೆ ಮನವಿ
ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಹಾಗೂ ಎಲ್ಲೂ ಜನ ದಟ್ಟಣೆ ಉಂಟಾಗುವುದಕ್ಕೆ ಅವಕಾಶ ನೀಡದೆ ಸರಳ ರೀತಿಯಲ್ಲಿ ಆಚರಣೆ ಮಾಡಬೇಕು ಎಂದು ಬಿಬಿಎಂಪಿ ಕೋರಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿವರ್ಷವೂ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಈ ಹಬ್ಬವನ್ನು ಕೆಲವೊಂದು ಮುಂಜಾಗ್ರತಾ ಕ್ರಮ ವಹಿಸಿ, ಸುರಕ್ಷಿತವಾಗಿ ಆಚರಿಸಬೇಕು.ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲೂ ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಸುರಕ್ಷತೆ ಕಾಪಾಡಬೇಕು’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ನಗರದ ಜನರಲ್ಲಿ ಮನವಿ ಮಾಡಿದ್ದಾರೆ.

‘ಈ ಬಾರಿ ಪಾಲಿಕೆಯು ಕೆರೆ, ತೊಟ್ಟಿ, ಹಾಗೂ ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಿಲ್ಲ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಒಯ್ಯುವಾಗ ಮತ್ತು ವಿಸರ್ಜನಾ ಸಮಯದಲ್ಲಿ ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ. ಸಾರ್ವಜನಿಕವಾಗಿ ಪೂಜೆಗೊಳ್ಳುವ ಗಣಪತಿ ವಿಗ್ರಹಗಳನ್ನು ಪಾಲಿಕೆ ನಿಯೋಜನೆ ಮಾಡಿರುವ ವಾಹನಗಳಲ್ಲೇ ವಿಸರ್ಜನೆ ಮಾಡಬೇಕು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ವಾರ್ಡ್‌ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಯೂ ಗರಿಷ್ಠ 3 ದಿನಗಳಿಗೆ ಸೀಮಿತ. ಪೂಜಾ ಸ್ಥಳಗಳಲ್ಲೂ ಏಕಕಾಲದಲ್ಲಿ 20ಕ್ಕಿಂತ ಹೆಚ್ಚುಮಂದಿ ಸೇರದಂತೆ ನೋಡಿಕೊಳ್ಳಬೇಕು. ಆ. 24ರಷ್ಟರ ಒಳಗೆ ಎಲ್ಲ ಮೂರ್ತಿಗಳ ವಿಸರ್ಜನೆ ಪೂರ್ಣಗೊಳ್ಳಬೇಕು. ಈ ಸಂದರ್ಭದಲ್ಲಿಯಾವುದೇ ರೀತಿಯ ಸಾಂಸ್ಕೃತಿಕ, ಸಂಗೀತ ಅಥವಾ ನೃತ್ಯ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಜಂಗುಳಿ ಸೇರುವುದಕ್ಕೆ ಅವಕಾಶ ನೀಡಬಾರದು. ಭಕ್ತರು ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪೂಜಿಸಿ ಮನೆಯಲ್ಲೇ ಅವುಗಳನ್ನು ವಿಸರ್ಜನೆ ಮಾಡಬೇಕು’ ಎಂದು ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

‘ಗಣೇಶೋತ್ಸವ ಆಚರಿಸುವಾಗ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ 2005ರ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಹಬ್ಬದ ವಿಶೇಷ-ದರಗಳ ಪಟ್ಟಿ (ಪ್ರತಿ ಕೆ.ಜಿ.ಗೆ ₹ಗಳಲ್ಲಿ)
ಕನಕಾಂಬರ; 1,600
ಮಲ್ಲಿಗೆ;1,000
ಸೇವಂತಿಗೆ;450
ಗುಲಾಬಿ;250
ಗೆನ್ನೇರಿ(ಕಣಗಲೆ);150
ಏಲಕ್ಕಿ ಬಾಳೆ;70
ಪತ್ರೆ; 10(ಪ್ರತಿ ಕಟ್ಟಿಗೆ)
ಗರಿಕೆ;15(ಪ್ರತಿ ಕಟ್ಟಿಗೆ)
ತೆಂಗು;30 (ಒಂದಕ್ಕೆ)
ಬಾಳೆಕಂದು;50-200(ಜೋಡಿಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT