ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಮೂರ್ತಿ ಹಣ ಬಾಲಕಿಯರ ಶಿಕ್ಷಣಕ್ಕೆ

ತುಳಸಿ ಬೀಜ ಬಳಸಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ
Last Updated 22 ಆಗಸ್ಟ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಬೇಕು. ಆದರೆ, ಅದು ಪರಿಸರ ಸ್ನೇಹಿಯಾಗಿರಬೇಕು. ಗಣೇಶನ ಮೂರ್ತಿಗೆ ನೀಡುವ ಹಣ ಸಾಮಾಜಿಕ ಕಾರ್ಯಕ್ಕೆ ಉಪಯೋಗವಾಗಬೇಕು ಎಂಬ ನಿರ್ಧಾರ ನಿಮ್ಮದಾಗಿದ್ದರೆ, ಬೆಂಗಳೂರು ರೋಟರಿ ಕ್ಲಬ್‌ನ ‘ಇ ಕ್ಲಬ್‌ ಆಫ್‌ ಗ್ರೀನ್‌ ಸಿಟಿ’ ಸಂಸ್ಥೆ ಅದನ್ನು ಕಾರ್ಯರೂಪಕ್ಕೆ ತರಲಿದೆ.

ಮಣ್ಣಿನ ಗಣಪತಿ ಮೂರ್ತಿಗಳ ಮಾರಾಟದಿಂದ ಬಂದ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವ ಕಾರ್ಯಕ್ಕೆ ಸಂಸ್ಥೆ ಮುಂದಾಗಿದೆ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಷೇಧ ವಿಧಿಸಿದ್ದು, ಮಣ್ಣಿನ ಮೂರ್ತಿಗಳ ಬಳಕೆಗೆ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ, 1 ಅಡಿ ಎತ್ತರದ ಗಣೇಶ ಮತ್ತು ಗೌರಿಯ ಮಣ್ಣಿನ ಮೂರ್ತಿಗಳನ್ನು ಸಂಸ್ಥೆ ತಯಾರಿಸುತ್ತಿದೆ.ಗೌರಿ ಮೂರ್ತಿಗೆ ₹75, ಗಣೇಶ ಮೂರ್ತಿಗೆ ₹550 ಬೆಲೆ ನಿಗದಿ ಮಾಡಲಾಗಿದೆ.

‘ಮೂರು ವರ್ಷಗಳಿಂದ ಈ ಕಾರ್ಯ ಮಾಡುತ್ತಿದ್ದೇವೆ. ಮೊದಲ ವರ್ಷ 270, ಕಳೆದ ವರ್ಷ 650 ಮೂರ್ತಿಗಳನ್ನು ಮಾಡಿದೆವು. ಇವುಗಳ ಮಾರಾಟದಿಂದ ಮೊದಲ ವರ್ಷ ₹45 ಸಾವಿರ ಹಾಗೂ ಎರಡನೇ ವರ್ಷ ₹1.35 ಲಕ್ಷ ಹಣ ಸಂಗ್ರಹವಾಯಿತು. ಈ ಹಣವನ್ನು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಮತ್ತು ಅಧ್ಯಯನ ಸಾಮಗ್ರಿ ಖರೀದಿಸಲು ನೀಡಿದ್ದೇವೆ’ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಚೆಂಗಪ್ಪ ಚೊಟ್ಟೇರ ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಹೆಚ್ಚು ಜನ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ಹಬ್ಬದ ಆಚರಣೆಯೊಂದಿಗೆ ಮಕ್ಕಳ ಶಿಕ್ಷಣಕ್ಕೆ ಅಲ್ಪ ಕೊಡುಗೆ ನೀಡಿದ ತೃಪ್ತಿ ಜನರಿಗೆ ಸಿಗುತ್ತಿದೆ ಎಂದು ಹೇಳಿದರು.

‘ಕುಂಬಾರರಿಂದಲೇ ಮೂರ್ತಿಗಳನ್ನು ಖರೀದಿಸುತ್ತೇವೆ. ಒಂದು ಮೂರ್ತಿಗೆ ನಮಗೆ ₹200 ಖರ್ಚು ಬರುತ್ತದೆ. ಕುಂಬಾರರಿಗೂ ಈ ಮೂಲಕ ಹೆಚ್ಚು ಕೆಲಸ ಸಿಗಲಿ ಎಂಬ ಉದ್ದೇಶ ನಮ್ಮದು’ ಎಂದು ಅವರು ಹೇಳುತ್ತಾರೆ.

ತುಳಸಿ ಗಣೇಶ: ತುಳಸಿ ಮತ್ತು ಸಸ್ಯದ ಬೀಜಗಳನ್ನು ಬಳಸಿ ಈ ಮೂರ್ತಿಗಳನ್ನು ತಯಾರಿಸಲಾಗಿದೆ. ಮೂರ್ತಿಗಳ ಜೊತೆಗೆ ಕಾಂಕ್ರೀಟ್‌ ಕುಂಡ ಹಾಗೂಸಾವಯವ ಗೊಬ್ಬರವನ್ನು (ತೆಂಗಿನ ನಾರಿನಿಂದ ತಯಾರಿಸಿದ) ನೀಡಲಾಗುತ್ತದೆ.

ಬಕೆಟ್‌ ಅಥವಾ ಕುಂಡದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು. ನಂತರ ನಿಧಾನವಾಗಿ ನೀರನ್ನು ತೆಗೆಯಬೇಕು. ಮೂರ್ತಿಯ ಮಣ್ಣನ್ನು ಕುಂಡದಲ್ಲಿ ಹಾಕಿದರೆ, ಅಲ್ಲಿಯೇ ತುಳಸಿ ಅಥವಾ ಬೇರೆ ಸಸ್ಯ ಬೆಳೆಯುತ್ತದೆ.

ಮಣ್ಣಿನ ಮೂರ್ತಿ ಸಿಗುವ ಸ್ಥಳ
ನಗರದ ವಿವಿಧೆಡೆ ಈ ಮಣ್ಣಿನ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ.ಗಂಗಾನಗರದ ಸಿಬಿಐ ಕಚೇರಿ, ರಾಜಾಜಿನಗರ ಇಎಸ್‌ಐ, ದೊಡ್ಡನಕುಂದಿ ಹೊರ ವರ್ತುಲ ರಸ್ತೆ, ಕನಕಪುರ ರಸ್ತೆ, ಶೇಷಾದ್ರಿಪುರದ ಬಳಿ ಈ ಮೂರ್ತಿಗಳು ಲಭ್ಯ ಇವೆ.

ಸಂಪರ್ಕಕ್ಕೆ ಚೆಂಗಪ್ಪ – 97418 70088.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT