ಸೋಮವಾರ, ಜೂನ್ 27, 2022
25 °C
9 ವಿಡಿಯೊ ಪುರಾವೆ; ಅಂತಿಮ ಹಂತದಲ್ಲಿ ಪೂರ್ವ ವಿಭಾಗ ಪೊಲೀಸರ ತನಿಖೆ l ದೋಷಾರೋಪ ಪಟ್ಟಿ ಸಲ್ಲಿಕೆ ಶೀಘ್ರ

ಸಾಮೂಹಿಕ ಅತ್ಯಾಚಾರ: ಪತಿಯಿಂದಲೇ ಅತ್ಯಾಚಾರ ಮಾಡಿಸಿ ಚಿತ್ರೀಕರಣ!

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಾಂಗ್ಲಾದೇಶದ 23 ವರ್ಷದ ಯುವತಿ ಮೇಲೆ ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಪೂರ್ವ ವಿಭಾಗದ ಪೊಲೀಸರು ನಡೆಸುತ್ತಿರುವ ತನಿಖೆ ಅಂತಿಮ ಹಂತದಲ್ಲಿದ್ದು, ನ್ಯಾಯಾಲಯಕ್ಕೆ ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.

ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿರುವ ಪೊಲೀಸರು, ಕೃತ್ಯದ ಕಾರಣ ಹಾಗೂ ಆರೋಪಿಗಳು ಕೃತ್ಯ ಎಸಗಿದ ಪರಿಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯರು ಸೇರಿದಂತೆ 10 ಆರೋಪಿಗಳು, ಯುವತಿಯೊಬ್ಬಳ ಮೇಲೆ ಯಾವ ರೀತಿ ಮೃಗೀಯವಾಗಿ ವರ್ತಿಸಿ ಗುಪ್ತಾಂಗಕ್ಕೆ ಹಾನಿ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದರೆಂಬ ಅಂಶ ದೋಷಾರೋಪ ಪಟ್ಟಿಯಲ್ಲಿದೆ.

ಸಂತ್ರಸ್ತೆ ಅನುಭವಿಸಿದ ಯಾತನೆ ಹಾಗೂ ಆಕೆ ಮೇಲಾದ ದೌರ್ಜನ್ಯದ ಸಂಗತಿ ಕೇಳಿ ಕೆಲ ಪೊಲೀಸ್ ಅಧಿಕಾರಿಗಳೇ ಮರುಕಪಟ್ಟಿದ್ದಾರೆ. ಇಡೀ ರಾಜ್ಯದಲ್ಲೇ ಇಷ್ಟು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಗಳನ್ನು ನೋಡಿರಲಿಲ್ಲವೆಂದು ಅಧಿಕಾರಿಯೊಬ್ಬರು ಹೇಳಿದರು.

ಮೂವರು ಮಹಿಳಾ ಆರೋಪಿಗಳ ಸಮ್ಮುಖದಲ್ಲೇ ಏಳು ಪುರುಷ ಆರೋಪಿಗಳು, ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಸಂತ್ರಸ್ತೆಯ ಗುಪ್ತಾಂಗದೊಳಗೆ ಮದ್ಯದ ಬಾಟಲಿ ಹಾಗೂ ಕಾಲ್ಬೆರಳು ತುರುಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳು, ಎಲ್ಲ ದೃಶ್ಯಗಳನ್ನೂ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಸಂತ್ರಸ್ತೆ ಹಾಗೂ ಆರೋಪಿಗಳು ಪರಿಚಯಸ್ಥರು. ಹಣದ ವ್ಯವಹಾರ ಸಂಬಂಧ ಅವರ ನಡುವೆ ವೈಷಮ್ಯ ಬೆಳೆದಿತ್ತು. ಅದೇ ವಿಚಾರವಾಗಿ ಮಾತನಾಡಬೇಕೆಂದು ಚೆನ್ನೈನಿಂದ ಸಂತ್ರಸ್ತೆಯನ್ನು ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಕೆ. ಚನ್ನಸಂದ್ರದ ಮನೆಗೆ ಕರೆಸಿದ್ದ ಆರೋಪಿಗಳು, ಮದ್ಯದ ಪಾರ್ಟಿ ಮಾಡಿದ್ದರು. ಅದಾದ ನಂತರ ಜಗಳ ತೆಗೆದು ಕೃತ್ಯ ಎಸಗಿದ್ದರು. ಕೃತ್ಯದ ಎಲ್ಲ ದೃಶ್ಯಗಳಿರುವ 9 ವಿಡಿಯೊಗಳು ಲಭ್ಯವಾಗಿವೆ. ಅವುಗಳು ಸೇರಿದಂತೆ ಘಟನಾ ಸ್ಥಳದಲ್ಲಿ ಸಿಕ್ಕ ಬಟ್ಟೆ, ರಕ್ತದ ಕಲೆಗಳು, ಮದ್ಯದ ಬಾಟಲಿಗಳು ಹಾಗೂ ಇತರೆ ವಸ್ತುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

‘ಆರೋಪಿಗಳಾದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು, ಹಕೀಲ್, ಶೂಬೂಜ್, ರಫ್ಸಾನ್, ತಾನಿಯಾ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 9 ಮಂದಿ ಬಾಂಗ್ಲಾ ಪ್ರಜೆಗಳು. ಒಬ್ಬ ಮಾತ್ರ ಹೈದರಾಬಾದ್ ನಿವಾಸಿ’  ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಅತ್ಯಾಚಾರಕ್ಕೆ ಪತ್ನಿಯಿಂದಲೇ ಪ್ರಚೋದನೆ: ‘ರಫ್ಸಾನ್ ಹಾಗೂ ತಾನಿಯಾ ಮದುವೆಯಾಗಿದ್ದರು. ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಲು ಪತ್ನಿ ತಾನಿಯಾಳೇ ತನ್ನ ಪತಿಗೆ ಪ್ರಚೋದನೆ ನೀಡಿದ್ದಳು. ಸಂತ್ರಸ್ತೆ ಮೇಲೆ ತನ್ನ ಪತಿ ಅತ್ಯಾಚಾರ ಎಸಗುವ ವೇಳೆಯಲ್ಲಿ ತಾನೇ ವಿಡಿಯೊ ಚಿತ್ರೀಕರಣ ಮಾಡಿದ್ದಳು. ಆ ವಿಡಿಯೊ ಸಹ ಲಭ್ಯವಾಗಿದೆ’ ಎಂದೂ ಅಧಿಕಾರಿ ತಿಳಿಸಿದರು.

‘ಎರಡು ಕೊಠಡಿ ಮನೆಯಲ್ಲಿ ಕೃತ್ಯ ನಡೆದಿದೆ. ಒಂದು ಕೊಠಡಿಯಲ್ಲಿ ಕುಳಿತಿದ್ದ ಆರೋಪಿಗಳು, ಅಲ್ಲಿಯೇ ಸಂತ್ರಸ್ತೆ ಜೊತೆ ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅದಾದ ನಂತರ, ಆರೋಪಿ ತಾನಿಯಾ ಸಂತ್ರಸ್ತೆಯನ್ನು ಮತ್ತೊಂದು ಕೊಠಡಿಗೆ ಎಳೆದೊಯ್ದಿದ್ದಳು. ಅಲ್ಲಿ ಆಕೆಯ ಪತಿಯು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದ’ ಎಂದು ಅಧಿಕಾರಿ ಹೇಳಿದರು.

ನಾಲ್ವರು ಎಸಿಪಿ, 8 ಇನ್‌ಸ್ಪೆಕ್ಟರ್ ಕೆಲಸ

ಬೆಂಗಳೂರಿನಲ್ಲಿ ನಡೆದ ಅತ್ಯಾಚಾರದ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿಯೂ ಇರಲಿಲ್ಲ. ಅತ್ಯಾಚಾರದ ವಿಡಿಯೊಗಳು ಈಶಾನ್ಯ ರಾಜ್ಯಗಳು ಹಾಗೂ ಬಾಂಗ್ಲಾದೇಶದಲ್ಲಿ ಹರಿದಾಡಿದ್ದವು. ವಿಚಾರಣೆ ಆರಂಭಿಸಿದ್ದ ಅಸ್ಸಾಂ ಪೊಲೀಸರು, ಯುವತಿ ಕುಟುಂಬಸ್ಥರನ್ನು ಪತ್ತೆ ಮಾಡಿದ್ದರು. ಯುವತಿ ಹಾಗೂ ಆಕೆಯ ಸ್ನೇಹಿತರು ಬೆಂಗಳೂರಿನಲ್ಲಿರುವ ಸಂಗತಿ ಗೊತ್ತಾಗಿತ್ತು.

ವಿಡಿಯೊ ಹಾಗೂ ಮೊಬೈಲ್ ನಂಬರ್ ಸಹಿತವಾಗಿ ಅಸ್ಸಾಂ ಪೊಲೀಸರು, ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಮಾಹಿತಿ ಕಳುಹಿಸಿದ್ದರು. ತ್ವರಿತವಾಗಿ ಸ್ಪಂದಿಸಿದ ಕಮಲ್ ಪಂತ್, ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖಾ ತಂಡವು ಒಂದೇ ದಿನದಲ್ಲೇ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಕೃತ್ಯದ ಬಗ್ಗೆ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ನಾಲ್ವರು ಎಸಿಪಿಗಳು ಹಾಗೂ 8 ಇನ್‌ಸ್ಪೆಕ್ಟರ್ ನೇತೃತ್ವದ ತಂಡಗಳು, ಹಗಲಿರುಳು ಶ್ರಮಿಸಿ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಿದ್ಧಪಡಿಸುತ್ತಿವೆ.

* ಪ್ರಕರಣದ ತನಿಖೆಯಲ್ಲಿ ವಿಭಾಗದ ಇಡೀ ತಂಡ ಕೆಲಸ ಮಾಡುತ್ತಿದೆ. ದೋಷಾರೋಪ ಪಟ್ಟಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಂಗ್ರಹಿಸುತ್ತಿದೆ ‌.

–ಎಸ್‌.ಡಿ.ಶರಣಪ್ಪ, ಪೂರ್ವ ವಿಭಾಗದ ಡಿಸಿಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು