ಒಂದೇ ದಿನ 1.69 ಲಕ್ಷ ಮೂರ್ತಿ ವಿಸರ್ಜನೆ

7

ಒಂದೇ ದಿನ 1.69 ಲಕ್ಷ ಮೂರ್ತಿ ವಿಸರ್ಜನೆ

Published:
Updated:
Deccan Herald

ಬೆಂಗಳೂರು: ನಗರದಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಗೆ ಬಿಬಿಎಂಪಿ ವ್ಯವಸ್ಥೆ ಮಾಡಿದ್ದ ಕೆರೆಗಳು, ಪುಷ್ಕರಣಿಗಳಲ್ಲಿ ‌ಗುರುವಾರ ಒಂದೇ ದಿನ 1,69,394 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.‌ 

ಗಣೇಶ ಮೂರ್ತಿಗಳ ವಿಸರ್ಜನೆಗೆ ಸ್ಯಾಂಕಿ ಕೆರೆ, ಯಡಿಯೂರು ಕೆರೆ, ಹಲಸೂರು ಕೆರೆ ಸೇರಿದಂತೆ ಹಲವು ಕೆರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪಾಲಿಕೆಯ ಪ್ರಮುಖ ವಲಯಗಳ ವೃತ್ತಗಳು ಸೇರಿದಂತೆ ಅಧಿಕ ಕಡೆ ಸಂಚಾರಿ ಟ್ಯಾಂಕರ್‌ಗಳ ಸೇವೆ ಕಲ್ಪಿಸಲಾಗಿದೆ. 

ಯಡಿಯೂರು ಕೆರೆ ಒಂದರಲ್ಲಿಯೇ ವಿಸರ್ಜನೆಯಾದ 30,845 ಮೂರ್ತಿಗಳ ಪೈಕಿ 6,000 ಪಿಒಪಿ ಮೂರ್ತಿಗಳಿದ್ದವು. ಹಾಗೆಯೇ ಹಲಸೂರು ಕೆರೆಯಲ್ಲಿ 536, ಸ್ಯಾಂಕಿ ಕೆರೆಯಲ್ಲಿ 325 ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿವೆ.

ಗಣೇಶ ಮೂರ್ತಿಗಳ ವಿಸರ್ಜನೆಗೆ ಕೆರೆಗಳಲ್ಲಿ ನಿರ್ಮಿಸಿರುವ ಕಲ್ಯಾಣಿಗಳ ಸುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ನೂಕುನುಗ್ಗಲು ತಪ್ಪಿಸಲು, ಪ್ರತಿ ವಿಸರ್ಜನಾ ಕೇಂದ್ರದಲ್ಲಿ ತಲಾ ಮೂರು ಕೌಂಟರ್‌ಗಳನ್ನು ತೆರೆಯಲಾಗಿದೆ. 30 ನುರಿತ ಈಜುಗಾರರನ್ನು ನಿಯೋಜಿಸಿದ್ದು ಕೆರೆ, ಕಲ್ಯಾಣಿಗಳ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. 

ಮಾಹಿತಿ ಕೇಂದ್ರ: ಸಾರ್ವಜನಿಕರಿಗೆ ಗಣೇಶ ವಿಸರ್ಜನೆ ಕುರಿತು ಮಾಹಿತಿ ನೀಡಲು ಮತ್ತು ಜಾಗ್ರತೆ ವಹಿಸುವಂತೆ ತಿಳಿಸಲು ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಆಂಬ್ಯುಲೆನ್ಸ್‌, ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 14 (ಕೆಎಸ್‌ಪಿಸಿಬಿ) ಸಂಚಾರಿ ಟ್ಯಾಂಕರ್‌ಗಳು, ಪಾಲಿಕೆ ವತಿಯಿಂದ 345 ತಾತ್ಕಾಲಿಕ ಬಾವಿ ಹಾಗೂ ಸಂಚಾರಿ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ. ಜನಜಂಗುಳಿ ನಡುವೆ ಕೆರೆಗೆ ಬಂದು ಗಣೇಶ ವಿಸರ್ಜನೆ ಮಾಡಲು ಸಾಧ್ಯವಾಗದವರಿಗೆ ಪ್ರತಿ ವಾರ್ಡಿಗೂ ಮೊಬೈಲ್‌ ಟ್ಯಾಂಕರ್‌ಗಳನ್ನು ನಿಯೋಜನೆ ಮಾಡಲಾಗಿದೆ.

ಬಿಬಿಎಂಪಿ ಹರಸಾಹಸ: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾದ ಕಸವನ್ನು ವಿಲೇವಾರಿ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುರುವಾರ ಹರಸಾಹಸ ನಡೆಸಿದೆ. ಹೆಚ್ಚುವರಿಯಾಗಿ ಉತ್ಪತ್ತಿಯಾದ  216.7 ಟನ್‌ ಹಸಿ ತ್ಯಾಜ್ಯವನ್ನು ವಿಲೇವಾರಿ ಮಾಡಿದೆ. ಆದರೆ, ನಗರದ ಮಾರುಕಟ್ಟೆ ಪ್ರದೇಶಗಳಲ್ಲದೆ ಹಲವೆಡೆ ತ್ಯಾಜ್ಯದ ರಾಶಿ ಹಾಗೆಯೇ ಬಿದ್ದಿದೆ.  

ನಗರದಲ್ಲಿ ಸಾಮಾನ್ಯವಾಗಿ ನಾಲ್ಕು ಸಾವಿರ ಟನ್‌ ಕಸ ಉತ್ಪತ್ತಿಯಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಇದರ ಪ್ರಮಾಣ ಶೇ 20ರಷ್ಟು ಹೆಚ್ಚಾಗುತ್ತದೆ. ಬಾಳೆ ಕಂಬ, ಕೊಳೆತ ಹೂವು ಸೇರಿದಂತೆ ಹಲವು ಬಗೆಯ ಕಸವನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿದೆ.
ಸಂಗ್ರಹವಾಗಿದ್ದ ಹೆಚ್ಚುವರಿ ಕಸವನ್ನು ವಿವಿಧ ಘಟಕಗಳಿಗೆ ವಿಲೇವಾರಿ ಮಾಡಲಾಗಿದೆ. ಗುರುವಾರ ಸಂಜೆ ವೇಳೆಗೆ ಬಹುತೇಕ ಹೆಚ್ಚುವರಿ ಕಸ ವಿಲೇವಾರಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು. 

* ಒಟ್ಟು ವಿಸರ್ಜನೆಯಾದ ಮೂರ್ತಿಗಳು;1,69,394

* ಮಣ್ಣಿನ ಮೂರ್ತಿಗಳು;1,62,140 

* ಪಿಒಪಿ ಮೂರ್ತಿಗಳು;7,254

* ಹೆಚ್ಚುವರಿ ಹಸಿ ತ್ಯಾಜ್ಯ ಉತ್ಪತ್ತಿ (ಮೆಟ್ರಿಕ್‌ ಟನ್‌ಗಳಲ್ಲಿ);216.7

***

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 4

  Angry

Comments:

0 comments

Write the first review for this !