ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗನಿಗೆ ನೆರವಾದ ಮನೆ ಗ್ರಂಥಾಲಯ’

Last Updated 29 ಏಪ್ರಿಲ್ 2018, 11:56 IST
ಅಕ್ಷರ ಗಾತ್ರ

ಕುಮಟಾ: ‘ನಮ್ಮ ಮನೆಯಲ್ಲಿ ಕನ್ನಡ–ಇಂಗ್ಲಿಷ್ ಸಾಹಿತ್ಯದ ಗ್ರಂಥಾಲಯವೇ ಇದ್ದುದರಿಂದ ಕೇಂದ್ರ
ಲೋಕ ಸೇವಾ ಆಯೋಗದ ಅಂತಿಮ ಪರೀಕ್ಷೆಯ ಕನ್ನಡ ಐಚ್ಛಿಕ ವಿಷಯ ಹಾಗೂ ಸಾಮಾನ್ಯ ಇಂಗ್ಲಿಷ್ ಬಗ್ಗೆ ಸಾಕಷ್ಟು ತಯಾರಿ ನಡೆಸಲು ಅನುಕೂಲವಾಯಿತು’ ಎಂದು ಯುಪಿಎಸ್‌ಸಿ ರ್‍ಯಾಂಕ್ ವಿಜೇತ ಸುದರ್ಶನ ಭಟ್ಟ ಅವರ ತಂದೆ, ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಜಿ.ಭಟ್ಟ ಮಗನ ಯಶಸ್ಸಿನ ಗುಟ್ಟನ್ನು ‘ಪ್ರಜಾವಾಣಿ’ಯೊಂದಿಗೆ ಶನಿವಾರ ಹಂಚಿಕೊಂಡರು.

‘ನಾನು ಇಂಗ್ಲಿಷ್ ಪ್ರಾಧ್ಯಾಪಕ. ಸ್ವತಃ ಸಾಹಿತಿಯಾಗಿದ್ದರಿಂದ ಕನ್ನಡ–ಇಂಗ್ಲಿಷ್ ಎರಡೂ ವಿಷಯಗಳನ್ನು ಪರೀಕ್ಷೆಯ ದೃಷ್ಟಿಯಿಂದ ಚರ್ಚಿಸುತ್ತಿದ್ದೆವು. ಸತತ ಓದಿನಿಂದ ಮನಸ್ಸಿಗಾದ ದಣಿವು ನಿವಾರಿಸಿಕೊಳ್ಳಲು ನನ್ನ ಮಗ ಕಲಿತ ಯೋಗಾಭ್ಯಾಸ ಹಾಗೂ ಸಂಗೀತ ಸಹಾಯವಾಯಿತು. ಇವೆರಡೂ ಅವನಲ್ಲಿ ಅದ್ಭುತ ಏಕಾಗ್ರತೆ ಮೂಡಿಸಿದವು’ ಎಂದರು.

‘ನಿಮ್ಮ ಮಗನ ಯಶಸ್ಸಿಗೆ ತಂದೆ–ತಾಯಿಯಾಗಿ ನಿಮ್ಮ ಕೊಡುಗೆ ಏನು?’ ಎಂದಾಗ, ‘ತಂದೆ ಯಾವಾಗಲೂ ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ಸಿದ್ಧಪಡಿಸುತ್ತಾನೆ. ತಾಯಿ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಾಳೆ. ನನ್ನ ಮಗ ಎಂಜಿನಿಯರ್ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆಗೆ ಓದುವಾಗ ಕೆಲಸ ಬಿಟ್ಟನಲ್ಲ ಎಂದು ಮನಸ್ಸಿನ ಮೂಲೆಯಲ್ಲಿ ಒಂದು ಅಳುಕು ಇತ್ತು. ಇದೇ ಹೆಗಡೆ ಊರಿನ ಸರ್ಕಾರಿ ಶಾಲೆಯಲ್ಲಿ, ಗಿಬ್ ಹೈಸ್ಕೂಲಿನಲ್ಲಿ, ನಂತರ ನಾನು ಕೆಲಸ ಮಾಡಿದ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ಓದಿ ಈ ಮಟ್ಟಕ್ಕೆ ಏರಿದ್ದು ಹೆಮ್ಮೆಯ ಸಂಗತಿ’ ಎಂದು ಸಂಭ್ರಮಿಸಿದರು.

‘ಕುಮಟಾದಂಥ ಸಾಧಾರಣ ಊರಿನಲ್ಲಿರುವ ಶಿಕ್ಷಣ ಸಂಸ್ಥೆ ಯಲ್ಲಿ ಓದಿದರೂ ಸತತ ಪ್ರಯತ್ನದಿಂದ ಪರೀಕ್ಷೆ ಉತ್ತೀರ್ಣ ಮಾಡಬಹುದು ಎನ್ನುವುದಕ್ಕೆ ನಮ್ಮ ಮಗ ಉದಾಹರಣೆ’ ಎಂದರು.

– ಎಂ.ಜಿ.ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT