ಸೋಮವಾರ, ಆಗಸ್ಟ್ 15, 2022
20 °C

ಕಸ ಸಂಗ್ರಹಕ್ಕೆ ಶುಲ್ಕ ಜಾರಿ ಸದ್ಯಕ್ಕಿಲ್ಲ: ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕಸ ನಿರ್ವಹಣೆಗಾಗಿ ವಿಧಿಸುವ ಬಳಕೆದಾರರ ಸೇವಾ ಶುಲ್ಕವನ್ನು ವಿದ್ಯುತ್‌ ಬಿಲ್‌ ಜೊತೆಗೆ ಸಂಗ್ರಹಿಸುವುದನ್ನು ಸದ್ಯಕ್ಕೆ ಅನುಷ್ಠಾನಗೊಳಿಸದೇ ಇರಲು ಬಿಬಿಎಂಪಿ ನಿರ್ಧರಿಸಿದೆ. 

ಕಸ ಬಳಕೆದಾರರ ಸೇವಾ ಶುಲ್ಕವನ್ನು ವಿದ್ಯುತ್‌ ಬಿಲ್‌ ಜೊತೆಗೆ ಸಂಗ್ರಹಿಸುವ ಬಗ್ಗೆ ಬಿಬಿಎಂಪಿ ಇತ್ತೀಚೆಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಈ ಕುರಿತು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಇತ್ತೀಚೆಗೆ ಪತ್ರ ಬರೆದಿದ್ದರು.

ಈ ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕಾಂಗ್ರೆಸ್‌, ಆಮ್‌ ಆದ್ಮಪಿ ಪಾರ್ಟಿಗಳು ಬಿಬಿಎಂಪಿಯ ಈ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು.

‘ಕಸ ಬಳಕೆದಾರರ ಸೇವಾ ಶುಲ್ಕವನ್ನು ವಿದ್ಯುತ್‌ ಬಿಲ್‌ ಜೊತೆ ಸಂಗ್ರಹಿಸುವುದು ಪ್ರಸ್ತಾವದ ಹಂತದಲ್ಲಷ್ಟೇ ಇತ್ತು. ಈ ಬಗ್ಗೆ ಯಾವುದೇ ನಿರ್ಧಾರಗಳನ್ನು ಕೈಗೊಂಡಿರಲಿಲ್ಲ. ಸದ್ಯಕ್ಕೆ ಇದನ್ನು ಅನುಷ್ಠಾನಗೊಳಿಸದಿರಲು ನಿರ್ಧರಿಸಿದ್ದೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

2019ರ ಜು.30ರಂದು ಪಾಲಿಕೆ ಸಭೆಯಲ್ಲಿ ಅಂಗೀಕಾರಗೊಂಡ ಬಿಬಿಎಂಪಿಯ ಪೌರ ಕಸ ನಿರ್ವಹಣೆ ಉಪನಿಯಮಗಳ ಕುರಿತು ರಾಜ್ಯಪತ್ರದಲ್ಲಿ 2020 ಜೂನ್ 4ರಂದು ಅಧಿಸೂಚನೆ ಪ್ರಕಟವಾಗಿದೆ. ನಿತ್ಯ 100 ಕೆ.ಜಿಗಿಂತ ಕಡಿಮೆ ಕಸ ಉತ್ಪಾದಿಸುವ ಮನೆಗಳು /ಕಟ್ಟಡ ಸಮುಚ್ಚಯಗಳು ಮತ್ತು 100 ಕೆ.ಜಿ.ಗಿಂತ ಕಡಿಮೆ ಕಸ ಉತ್ಪಾದಿಸುವ ಹಾಗೂ 5000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ವಾಣಿಜ್ಯ ಮತ್ತು ಇತರೆ ಕಟ್ಟಡಗಳಿಗೆ ಇದರ ನಿಯಮ 15 ಇ ಮತ್ತು ಜೆಡ್‌ ಎಫ್‌ ಪ್ರಕಾರ ಶುಲ್ಕ ನಿಗದಿ ಮಾಡಲಾಗಿದೆ.

23ಕ್ಕೆ ‘ಬಿಬಿಎಂಪಿ ಚಲೋ’ ಹೋರಾಟ
ಬೆಂಗಳೂರು:
ಕಸ ಸಂಗ್ರಹಕ್ಕೆ ಮಾಸಿಕ ಶುಲ್ಕ ಸಂಗ್ರಹ ಮಾಡಲು ಮುಂದಾಗಿರುವ ಬಿಬಿಎಂಪಿ ನಡೆಯನ್ನು ವಿರೋಧಿಸಿ ಕಮ್ಯೂನಿಸ್ಟ್ ಪಕ್ಷವು (ಮಾರ್ಕ್ಸ್ ವಾದಿ) ಡಿ.23ರಂದು ಬೆಳಿಗ್ಗೆ 10.30ಕ್ಕೆ ‘ಬಿಬಿಎಂಪಿ ಚಲೋ’ ಹೋರಾಟ ಹಮ್ಮಿಕೊಂಡಿದೆ.

‘ಕಸ ನಿರ್ವಹಣೆ ಶುಲ್ಕ ಹಾಗೂ ರಸ್ತೆ ಸಾರಿಗೆ ಕರ ಸಂಗ್ರಹ ವಿರೋಧಿಸಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಸಹಿ ಸಂಗ್ರಹಿಸುತ್ತಿವೆ. ಇದನ್ನು ಬಿಬಿಎಂಪಿ ಆಡಳಿತಾಧಿಕಾರಿಗೆ ಸಲ್ಲಿಸಲಾಗುತ್ತದೆ. ಆಸ್ತಿ ತೆರಿಗೆ ಸಂದಾಯ ಮಾಡುವಾಗಲೇ ಘನ ತ್ಯಾಜ್ಯ ಕರವನ್ನು ಪಾವತಿಸಿದ್ದರೂ ಈಗ ಮತ್ತೆ ಬಳಕೆದಾರರ ಶುಲ್ಕ ವಿಧಿಸುತ್ತಿರುವುದು ಖಂಡನೀಯ. ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಇನ್ನಷ್ಟು ಸಮಸ್ಯೆಯನ್ನು ತಂದೊಡ್ಡಲಾಗುತ್ತಿದೆ’ ಎಂದು ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್. ಉಮೇಶ್ ತಿಳಿಸಿದ್ದಾರೆ.

‘₹ 940 ಕೋಟಿಯ ಕಸ ನಿರ್ವಹಣೆಯ ವ್ಯವಹಾರವನ್ನು ಬಿಬಿಎಂಪಿ ಆಡಳಿತದಿಂದ ಹೊರಗುಳಿಸಿ, ಕಾರ್ಪೊರೇಟ್ ಕಂಪನಿಗಳ ಮೂಲಕ ಸಾರ್ವಜನಿಕ ಹಣ ಲೂಟಿ ಹೊಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ವಾಹನ ಮಾಲೀಕರು ಈಗಾಗಲೇ ರಸ್ತೆ ತೆರಿಗೆ ಪಾವತಿಸಿದ್ದರೂ ತನ್ನ ವ್ಯಾಪ್ತಿಯ ರಸ್ತೆಗಳ ನಿರ್ವಹಣೆಗೆಂದು ಆಸ್ತಿ ತೆರಿಗೆಯ ಮೇಲೆ ಶೇ 2ರಷ್ಟು ರಸ್ತೆ ಸಾರಿಗೆ ಕರವನ್ನು ವಿಧಿಸಲು ಬಿಬಿಎಂಪಿ ಮುಂದಾಗಿದೆ. ಇದು ಪಾಲಿಕೆಯ ದಿವಾಳಿಕೋರತನವನ್ನು ತೋರುತ್ತದೆ’ ಎಂದು ಪಕ್ಷದ ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು