ಮಂಗಳವಾರ, ಮಾರ್ಚ್ 21, 2023
29 °C
ಸ್ಥಳೀಯರಲ್ಲಿ ಆತಂಕ *ಅಧಿಕಾರಿಗಳ ಜಾಣ ಕುರುಡು: ಆರೋಪ

ಬೋಳಾರೆ ಬಂಡೆ ಒಡಲಲ್ಲಿ ತ್ಯಾಜ್ಯದ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಹೊರವಲಯದಲ್ಲಿರುವ ಬೋಳಾರೆ ಬಂಡೆಯಲ್ಲಿ ವೈದ್ಯಕೀಯ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. 

ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೋಳಾರೆ ಬಂಡೆಯಲ್ಲಿ ಕೆಲ ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಬೃಹದಾಕಾರದ ಬಂಡೆಗಳ ನಡುವೆ ಕೆರೆಯ ಮಾದರಿಯ ಗುಂಡಿಗಳು ನಿರ್ಮಾಣವಾಗಿದ್ದು, ಅದರಲ್ಲಿ ನೀರು ತುಂಬಿಕೊಂಡಿವೆ. ಅದೇ ನೀರನ್ನು ದನಕರುಗಳು ಹಾಗೂ ಮೇಕೆಗಳು ಕುಡಿಯುತ್ತಿವೆ. ವಾರಾಂತ್ಯದಲ್ಲಿ ಹೆಚ್ಚಾಗಿ ಈ ಪ್ರದೇಶಕ್ಕೆ ಯುವಜನತೆ ಭೇಟಿ ನೀಡುತ್ತಾರೆ. ಬಂಡೆಯ ಮೇಲೆ ಬಂಡೇ ಮುನೇಶ್ವರ ದೇವಾಲಯ ಕೂಡ ಇದೆ. ಲಾಕ್‌ ಡೌನ್ ಅವಧಿಯಲ್ಲಿ ನಗರ ಪ್ರದೇಶದ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗಿದ್ದು, ಬಂಡೆಗಳ ನಡುವೆ ಇರುವ ನೀರು ಈಗ ಕಪ್ಪು ಬಣ್ಣಕ್ಕೆ ತಿರುಗಿದೆ. 

ಪ್ಲಾಸ್ಟಿಕ್, ವೈದ್ಯಕೀಯ ತ್ಯಾಜ್ಯ, ಬಳಸಿ ಬಿಟ್ಟ ಹಾಸಿಗೆಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಬಂಡೆಗಳ ನಡುವೆ ಹಾಕಲಾಗಿದೆ. ಕಸದ ಮೂಟೆಗಳ ರಾಶಿ ಬಿದ್ದಿವೆ. ಕೊರೊನಾ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳ ತ್ಯಾಜ್ಯವನ್ನು ಅಲ್ಲಿ ಹಾಕಿರುವುದು ಸುತ್ತಮುತ್ತಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

‘ರಾತ್ರಿ ವೇಳೆಯಲ್ಲಿ ಟಿಪ್ಪರ್ ವಾಹನಗಳ ಮೂಲಕ ತ್ಯಾಜ್ಯ ಸುರಿಯಲಾಗುತ್ತಿದೆ. ಎಲ್ಲಿಂದ ಈ ತ್ಯಾಜ್ಯ ತಂದು ಹಾಕಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಮೂರ್ನಾಲ್ಕು ತಿಂಗಳಲ್ಲಿಯೇ ಬಂಡೆಯು ಕಸದಿಂದ ಆವರಿಸಿಕೊಂಡಿದ್ದು, ಅಲ್ಲಿ ಓಡಾಡಲು ಭಯಪಡಬೇಕಿದೆ’ ಎಂದು ಕೃಷಿಕ ಮುನಿರಾಮಯ್ಯ ತಿಳಿಸಿದರು. 

‘ಈ ಹಿಂದೆ ಕಸ ಹಾಕಿದಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕ್ರಮ ಕೈಗೊಂಡಿದ್ದರು. ಬಳಿಕ ಯಾರೂ ಕಸ ಹಾಕಿರಲಿಲ್ಲ. ಲಾಕ್‌ ಡೌನ್ ಅವಧಿಯಲ್ಲಿ ರಾತ್ರಿ ವೇಳೆ ಕಸ ಹಾಕಲಾಗಿದೆ. ಅಧಿಕಾರಿಗಳು ಈ ಭಾಗಕ್ಕೆ ಬರುವುದು ಕಡಿಮೆ’ ಎಂದು ಮದ್ದಯ್ಯನಪಾಳ್ಯದ ನಿವಾಸಿ ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು. 

 ‘ವಾಹನ ಬರದಂತೆ ಕಂಬಿ ಅಳವಡಿಕೆ’

‘ರಾತ್ರಿ ವೇಳೆ ಟಿಪ್ಪರ್ ವಾಹನಗಳ ಮೂಲಕ ಕಸ ಹಾಕುವವರು ಕರೆಂಟ್ ತಂತಿಗಳನ್ನು ಕೂಡ ಹರಿದು ಹಾಕಿದ್ದರು. ಯಾವ ಸಮಯದಲ್ಲಿ ಅವರು ಬಂದು ಕಸ ಹಾಕುತ್ತಾರೆ ಎಂಬುದೇ ನಮಗೆ ತಿಳಿಯದಂತಾಗಿದೆ. ವಾಹನಗಳು ಬರದಂತೆ ನಾವೇ ಕಬ್ಬಿಣದ ಕಂಬಿ ಹಾಕಿದ್ದೇವೆ. ಈ ಹಿಂದೆ ಮೃತ ಹಸುಗಳನ್ನು ಕೂಡ ಇಲ್ಲಿಯೇ ಎಸೆದು ಹೋಗುತ್ತಿದ್ದರು. ರಾತ್ರಿ ವೇಳೆ ಕಾನೂನುಬಾಹಿರ ಚಟುವಟಿಕೆಗಳು ಕೂಡ ನಡೆಯುತ್ತಿದ್ದವು. ಪೊಲೀಸರಿಗೆ
ದೂರು ನೀಡಿದ ಬಳಿಕ ಕಡಿವಾಣ ಬಿದ್ದಿದೆ’ ಎಂದು ಬೋಳಾರೆ ಬಂಡೆಯ ಪಕ್ಕದಲ್ಲಿ ಇಟ್ಟಿಗೆ ತಯಾರಿಸುತ್ತಿರುವ ದಿನೇಶ್
ತಿಳಿಸಿದರು.

***

ಈ ಹಿಂದೆ ಭತ್ತದ ಹೊಟ್ಟು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಹಾಕಿದಾಗ ತೆರವು ಮಾಡಿಸಿದ್ದೆವು. ಈಗ ತ್ಯಾಜ್ಯ ಹಾಕಿದ್ದಾರೆ ಎನ್ನಲಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ
– ನಾಗರಾಜು ನಾಯ್ಕ್, ಸೂಳಿಕೆರೆ ಗ್ರಾ.ಪಂ. ಪಿಡಿಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು